

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(President Putin) ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಗುರುವಾರ ತಿಳಿಸಿದ್ದಾರೆ ಎಂದು ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾಸ್ಕೋದಲ್ಲಿರುವ ದೋವಲ್ ದಿನಾಂಕಗಳನ್ನು ನಿರ್ದಿಷ್ಟಪಡಿಸಿಲ್ಲ. ಆದರೆ, ಈ ವರ್ಷದ ಕೊನೆಯಲ್ಲಿ ಇದು ಭೇಟಿ ನಡೆಯುವ ಸಾಧ್ಯತೆಯಿದೆ ಎಂದು ವರದಿ ಉಲ್ಲೇಖಿಸಿದ್ದಾರೆ.
ಅಜಿತ್ ದೋವಲ್ ಹೇಳಿದ್ದೇನು?
"ನಮ್ಮದು ವಿಶೇಷವಾದ, ದೀರ್ಘವಾದ ಸಂಬಂಧ ಮತ್ತು ನಾವು ಈ ಸಂಬಂಧವನ್ನು ಗೌರವಿಸುತ್ತೇವೆ. ನಾವು ಉನ್ನತ ಮಟ್ಟದ ಸಂಬಂಧಗಳನ್ನು ಹೊಂದಿದ್ದೇವೆ.ಈ ಉನ್ನತ ಮಟ್ಟದ ಸಂಬಂಧಗಳು ಗಣನೀಯವಾಗಿ ಕೊಡುಗೆ ನೀಡಿವೆ. ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಬಗ್ಗೆ ತಿಳಿದು ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಸಂತೋಷಪಡುತ್ತೇವೆ. ದಿನಾಂಕಗಳು ಈಗ ಬಹುತೇಕ ಅಂತಿಮಗೊಂಡಿವೆ ಎಂದು ನಾನು ಭಾವಿಸುತ್ತೇನೆ" ಎಂದು NSA ಅಜಿತ್ ದೋವಲ್ ಹೇಳಿದ್ದಾರೆ. ಇಲ್ಲಿಯವರೆಗೆ, ಭೇಟಿಯ ಬಗ್ಗೆ ಮಾಸ್ಕೋದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ರಷ್ಯಾದೊಂದಿಗಿನ ಭಾರತದ ವ್ಯಾಪಾರ ಸಂಬಂಧಗಳ ಕುರಿತು ಭಾರತ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ಪ್ರವಾಸದ ಘೋಷಣೆ ಬಂದಿದೆ. ರಷ್ಯಾದಿಂದ ಇಂಧನವನ್ನು ಖರೀದಿಸುವ ಮೂಲಕ ಯುಕ್ರೇನ್ ವಿರುದ್ಧದ ಮಾಸ್ಕೋ ಯುದ್ಧಕ್ಕೆ ಭಾರತ ಸಹಾಯ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ, ಇದು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳನ್ನು ಹಳಿತಪ್ಪಿಸಿದೆ.(ಏಜೆನ್ಸೀಸ್)