

Russia Warning: ಮಧ್ಯಪ್ರಾಚ್ಯದಲ್ಲಿ ಸದ್ಯ ವಾತಾವರಣ ಬಿಗಡಾಯಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ಎರಡೂ ದೇಶಗಳು ಪರಸ್ಪರ ತೀವ್ರ ಕ್ಷಿಪಣಿ, ಡ್ರೋನ್ ದಾಳಿಗೆ ಮುಂದಾಗುತ್ತಿವೆ. ಏಟಿಗೆ ಎದಿರೇಟು, ಪ್ರತೀಕಾರದ ಜ್ವಾಲೆ ಚಿಮ್ಮುತ್ತಿದೆ. ಈ ಮಧ್ಯೆ ಹಸ್ತಕ್ಷೇಪಕ್ಕೆ ಮುಂದಾಗಿರುವ ಅಮೆರಿಕಾಗೆ ರಷ್ಯಾ ಖಡಕ್ ವಾರ್ನಿಂಗ್ ರವಾನಿಸಿದೆ.
ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಕ್ಷಿಪಣಿ, ಡ್ರೋನ್ ದಾಳಿಯನ್ನು ನಡೆಸಿದ ಇರಾನ್ಗೆ ಅಮೆರಿಕ ಎಚ್ಚರಿಕೆ ರವಾನಿಸಿತು. ಈ ಯುದ್ಧದಲ್ಲಿ ಒಪ್ಪಂದ ಮಾತುಕತೆ ಜೊತೆಗೆ ಕದನ ವಿರಾಮಕ್ಕೆ ಇರಾನ್ ಮುಂದಾಗಬೇಕು ಎಂದು ಯುಎಸ್ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದಕ್ಕೆ ಬಗ್ಗದ ಇರಾನ್, ತನ್ನ ಸೇಡಿನ ದಾಳಿಯನ್ನು ಮುಂದುವರಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅಮೆರಿಕ ಕೂಡ ಈ ಯುದ್ಧಕ್ಕೆ ಪ್ರವೇಶಿಸಲಿದೆ ಎಂಬ ಸುದ್ದಿ ಸದ್ಯ ರಷ್ಯಾವನ್ನು ಕೆಣಕಿದೆ.
ಇರಾನ್ ಶರಣಾಗಬೇಕು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆ ಮತ್ತು ಪಶ್ಚಿಮ ಏಷ್ಯಾದ ಕಡೆಗೆ ಅಮೆರಿಕದ ಯುದ್ಧ ವಿಮಾನಗಳ ಚಲನೆ ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಾಳ್ಮೆಯನ್ನು ಪರೀಕ್ಷಿಸಿದೆ. ಈ ಹಿನ್ನಲೆ ಸೂಪರ್ ಪವರ್ ಅಮೆರಿಕಕ್ಕೆ ರಷ್ಯಾ ಬಲವಾದ ಎಚ್ಚರಿಕೆ ಕೊಟ್ಟಿದೆ. ಇರಾನ್-ಇಸ್ರೇಲ್ ಯುದ್ಧದಲ್ಲಿ ಯುಎಸ್ ಮಿಲಿಟರಿ ಮಧ್ಯಪ್ರವೇಶಿಸಿದರೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ ಎಂದು ರಷ್ಯಾ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಮಿಲಿಟರಿ ಹಸ್ತಕ್ಷೇಪ ಅತ್ಯಂತ ಅಪಾಯಕಾರಿ ಎಂದು ರಷ್ಯಾ ಎಚ್ಚರಿಸಿದೆ.
"ಈ ಪರಿಸ್ಥಿತಿಯಲ್ಲಿ ಮಿಲಿಟರಿ ಹಸ್ತಕ್ಷೇಪದ ವಿರುದ್ಧ ನಾವು ವಾಷಿಂಗ್ಟನ್‌ಗೆ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಲು ಬಯಸುತ್ತೇವೆ. ಇದು ನಿಜವಾಗಿಯೂ ಅನಿರೀಕ್ಷಿತ ಪರಿಣಾಮಗಳನ್ನು ಹೊಂದಿರುವ ಅತ್ಯಂತ ಅಪಾಯಕಾರಿ ಹೆಜ್ಜೆ. ಈ ಬಗ್ಗೆ ಎಚ್ಚರ ಇರಲಿ" ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಮಾಧ್ಯಮಗಳಿಗೆ ತಿಳಿಸಿದ್ದಾರೆ,(ಏಜೆನ್ಸೀಸ್).