ಕಾನೂನು‌ ಕಾಯ್ದೆಗಳ ಸಂದೇಶ ಸಾರುತ್ತಿರುವ ಗ್ರಾಮಾಂತರ ಠಾಣೆಯ ಕಾಂಪೌಂಡ್

22-8.jpg
Published on

ಚಿಕ್ಕಬಳ್ಳಾಪುರ: ವಿವಿಧ ಕಾಯ್ದೆಗಳು ಹಾಗೂ ರಕ್ಷಣೆ ಬಗ್ಗೆ ಮಾಹಿತಿ ನೀಡುವ ಆಕರ್ಷಕ ಚಿತ್ರಗಳು, ಬರಹಗಳ ಮೂಲಕ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಗಮನ ಸೆಳೆಯುತ್ತಿದೆ.
ಮಕ್ಕಳ ವಿಶೇಷ ಟಕ, 112 ಸಹಾಯವಾಣಿ, ತೆರದ ಮನೆ, ಸೈಬರ್ ಕ್ರೈಂ, ಸರಗಳ್ಳತನ, ಮಕ್ಕಳ ರಕ್ಷಣೆ ಕಾಯ್ದೆ, ಬಾಲ್ಯವಿವಾಹ ನಿಷೇಧ, ಲೈಂಗಿಕ ಅಪರಾಧ ಸೇರಿ ಮಹತ್ವದ ವಿವಿಧ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಚಿತ್ರಗಳು ಕಲಾವಿದರಿಂದ ಆಕರ್ಷಕವಾಗಿ ಮೂಡಿ ಬಂದಿವೆ.
ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 69 ವಿಸ್ತರಣೆಯ ಹಿನ್ನೆಲೆಯಲ್ಲಿ ನಗರ ಭಾಗದಲ್ಲಿನ ಸರ್ಕಾರಿ ಕಚೇರಿ ಹಾಗೂ ಖಾಸಗಿ ಮಳಿಗೆ, ಕಟ್ಟಡಗಳು, ಕಾಂಪೌಂಡ್ ಗಳನ್ನು ತೆರವುಗೊಳಿಸಲಾಗಿದೆ. ಅದರಂತೆ ಗ್ರಾಮಾಂತರ ಠಾಣೆಗೆ ಸೇರಿದ ಜಾಗವೂ ರಸ್ತೆಗೆ ಹೋಗಿದೆ. ಇತ್ತೀಚೆಗೆ ಜೆಸಿಬಿ ಮೂಲಕ ತೆರವುಗೊಳಿಸಿದ್ದ ಕಾಂಪೌಂಡ್ ಅನ್ನು ಹೊಸದಾಗಿ ನಿರ್ಮಿಸಲಾಗಿದೆ. ಇದಕ್ಕೆ ಆಕರ್ಷಕ ಬಣ್ಣ ಬಳಿದು, ವಿವಿಧ ಚಿತ್ರ ಬರಹಗಳ ಮೂಲಕ ಜಾಗೃತಿ ಸಂದೇಶವನ್ನು ಸಾರಲಾಗುತ್ತಿದೆ.

*ಕಾನೂನು ಕಾಯ್ದೆಗಳ ಜಾಗೃತಿ
ಕಾನೂನು ಸುವ್ಯವಸ್ಥೆ ಕಾಪಾಡುತ್ತಿರುವುದರ ಜತೆಗೆ ಪೊಲೀಸ್ ಸಿಬ್ಬಂದಿ ಠಾಣೆ, ಶಾಲೆ ಹಾಗೂ ಗ್ರಾಮಗಳಲ್ಲಿ ಸಭೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹತ್ವದ ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಶಿಡ್ಲಟ್ಟದ ಶಾರದಾ ವಿದ್ಯಾಸಂಸ್ಥೆ, ಬಾಗೇಪಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಚಿಕ್ಕಬಳ್ಳಾಪುರದ ನ್ಯೂ ಹೊರೈಜಾನ್ ಶಾಲೆ, ಹಂಪಸಂದ್ರ ಸರ್ಕಾರಿ ಪ್ರೌಢಶಾಲೆ, ಮಂಚೇನಹಳ್ಳಿ ಸರ್ಕಾರಿ ಪ್ರೌಢಶಾಲೆ, ಪಾತಪಾಳ್ಯ ವಿಘ್ನೇಶ್ವರ ಶಾಲೆ, ಪೆರೇಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜು, ದಿಬ್ಬೂರಹಳ್ಳಿಯ ಸೂರ್ಯ ಶಾಲೆ ಸೇರಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಆಯಾ ವ್ಯಾಪ್ತಿಯ ಠಾಣೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ಕಾರ್ಯ ನಿರ್ವಹಣೆ ವೈಖರಿ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿನಿತ್ಯ ಸಂದೇಶ ಕಳುಹಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಜತೆಗೆ ಆಕರ್ಷಕ ಗೋಡೆಬರಹಗಳಿಂದಲೂ ಗಮನ ಸೆಳೆಯಲಾಗುತ್ತಿದೆ.  

*ಖುಷಿಯಲ್ಲಿ ಖಾಕಿ ಪಡೆ
ಗ್ರಾಮಾಂತರ ಪೊಲೀಸ್ ಠಾಣೆಯ ಹೊಸ ಕಾಂಪೌಂಡ್ ಗೆ ಆಕರ್ಷಕ ಚಿತ್ರ ಬರಹಗಳ ಸ್ಪರ್ಶ ಸಿಕ್ಕಿರುವುದನ್ನು ನೋಡಿ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಡಿವೈಎಸ್ಪಿ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net