ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಮಹಾಸಭೆ

Bel_Rubber
ಉಜಿರೆ ರಬ್ಬರ್ ಸೊಸೈಟಿ ಮಹಾಸಭೆ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ, ಉಪಾಧ್ಯಕ್ಷ ಅನಂತ ಭಟ್ ಎಂ, ಸಿಇಒ ರಾಜು ಶೆಟ್ಟಿ ಮೊದಲಾದವರಿದ್ದರು.
Published on

ಬೆಳ್ತಂಗಡಿ: ಇಲ್ಲಿನ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ 25.82 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ತಿಳಿಸಿದರು.

ಉಜಿರೆಯಲ್ಲಿ ಗುರುವಾರ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸದಸ್ಯರಿಂದ ಸಂಗ್ರಹಿಸಿದ ರಬ್ಬರನ್ನು ದೇಶದಾದ್ಯಂತ ಮಾರಾಟ ಮಾಡಲಾಗಿದ್ದು, ಹೆಚ್ಚಾಗಿ ಉತ್ಪಾದಕರಿಗೆ ಮಾರಾಟ ಮಾಡುವತ್ತ ಗಮನ ಕೇಂದ್ರೀಕರಿಸಿ ಸದಸ್ಯರ ಉತ್ಪನ್ನಗಳಿಗೆ ಉತ್ತಮ ಧಾರಣೆ ಸಿಗುವಂತೆ ಪ್ರಯತ್ನ ನಡೆಸಿದ್ದೇವೆ. ಸಂಘವು 150ಕ್ಕಿಂತಲೂ ಮೇಲ್ಪಟ್ಟು ಉತ್ಪಾದಕರೊಂದಿಗೆ ನೇರ ವ್ಯವಹಾರ ನಡೆಸಿದ್ದು, ರಬರ್‌ಗೆ ಸ್ಥಿರ ಬೇಡಿಕೆ ಇರುವಂತೆ ನೋಡಿಕೊಳ್ಳಲಾಗಿದೆ. ವರದಿ ಸಾಲಿನಲ್ಲಿ 3,927 ‘ಎ’ ತರಗತಿ ಸದಸ್ಯರು ಹಾಗೂ 28 ‘ಬಿ’ ತರಗತಿ ಸದಸ್ಯರಿದ್ದು, 1.31 ಕೋಟಿ ರೂ.ಗಿಂತ ಅಧಿಕ ಪಾಲು ಬಂಡವಾಳ ಹೊಂದಿದೆ ಎಂದರು. ಉಪಾಧ್ಯಕ್ಷ ಅನಂತ ಭಟ್ ಎಂ, ಸಿಇಒ ರಾಜು ಶೆಟ್ಟಿ, ನಿರ್ದೇಶಕರು ಉಪಸ್ಥಿತರಿದ್ದರು.

33 ಖರೀದಿ ಕೇಂದ್ರ ಕಾರ್ಯಾಚರಣೆ

ಸಂಘದಲ್ಲಿ 19 ಕೋಟಿ ರೂ.ಗಿಂತ ಅಧಿಕ ಠೇವಣಿ ಇದೆ. ಸಂಘದ ಒಟ್ಟು 33 ಖರೀದಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ವರದಿ ಸಾಲಿನಲ್ಲಿ ರಬ್ಬರಿಗೆ ಕಿಲೋ ಒಂದರ ಸರಾಸರಿ 150.42ರೂ. ದಾರಣೆ ಸಿಕ್ಕಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಇದು ಕಿಲೋವೊಂದರ 1.46 ರೂ. ಹೆಚ್ಚು ಆಗಿದೆ. ವರದಿ ವರ್ಷದಲ್ಲಿ 16,337 ಟನ್ ರಬ್ಬರ್ ಖರೀದಿಸಲಾಗಿದೆ. ಸದಸ್ಯರ ಬಹುದಿನದ ಬೇಡಿಕೆಯಾಗಿದ್ದ ರಬ್ಬರ್ ಹಾಲು ಖರೀದಿಯನ್ನು ಆರಂಭಿಸಿದ್ದು, ವರದಿ ಸಾಲಿನಲ್ಲಿ 2.36 ಕೋಟಿ ರೂ. ಮೌಲ್ಯದ ರಬ್ಬರ್ ಹಾಲು ಮಾರಾಟ ಮಾಡಲಾಗಿದೆ ಎಂದು ಶ್ರೀಧರ ಜಿ.ಭಿಡೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net