

RSS : ಅ. 1ರಂದು ದೆಹಲಿಯ ಡಾ.ಬಿ.ಆರ್.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಅಂಚೆ ಚೀಟಿ ಮತ್ತು ನಾಣ್ಯ ಬಿಡುಗಡೆ ಮಾಡಲಿದ್ದಾರೆ ಎಂದು ಮಂಗಳವಾರ(ಸೆ. 30) ವರದಿಯಾಗಿದೆ.
ಆರ್‌ಎಸ್‌ಎಸ್‌ನ ಶತಮಾನೋತ್ಸವದ ಸ್ಮರಣಾರ್ಥ ಅದರ ಕೊಡುಗೆಗಳನ್ನು ಗುರುತಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಂಚೆ ಚೀಟಿ ಮತ್ತು ನಾಣ್ಯವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. ಬಳಿಕ ಗಣ್ಯರು, ಸ್ವಯಂಸೇವಕರು ಮತ್ತು ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ 1925ರಲ್ಲಿ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರಿಂದ ಆರ್ಎಸ್ಎಸ್ ಸ್ಥಾಪನೆಯಾಯಿತು. ನಾಗರಿಕರಲ್ಲಿ ಸಾಂಸ್ಕೃತಿಕ ಅರಿವು, ಶಿಸ್ತು, ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಗುರಿಯನ್ನು ಹೊಂದಲು ಸಂಘ ಸ್ಥಾಪನೆಯಾಯಿತು. ಮುಂದೆ ಧರ್ಮ ಸಂಘಟನೆ, ದೇಶಭಕ್ತಿ ಸಂಘಟನೆಯಾಗಿ ಬೆಳೆದಿದೆ.
ಪ್ರತಿಯೊಬ್ಬ ಸ್ವಯಂಸೇವಕನು ತನ್ನನ್ನು ತಾನು ಅರ್ಪಿಸಿಕೊಳ್ಳುವ ಸರ್ವಾಂಗೀಣ ಉನ್ನತಿ, ಭಾರತದ ಸರ್ವತೋಮುಖ ಅಭಿವೃದ್ಧಿಯೇ ಸಂಘದ ಘೋಷಿತ ಗುರಿಯಾಗಿದೆ. ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಐತಿಹಾಸಿಕ ಸಾಧನೆಗಳನ್ನು ಗೌರವಿಸುಲಾಗುತ್ತಿದ್ದು, ಭಾರತದ ಸಾಂಸ್ಕೃತಿಕ ಪ್ರಯಾಣಕ್ಕೆ ಅದರ ಕೊಡುಗೆಗಳು ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ,
ಶತಮಾನೋತ್ಸವ ಕಾರ್ಯಕ್ರಮವು ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣಗಳು ಮತ್ತು ಸಂಘದ ಪರಂಪರೆ ಮತ್ತು ದೇಶಾದ್ಯಂತ ಅದರ ನಡೆಯುತ್ತಿರುವ ಕಾರ್ಯಗಳನ್ನು ಪ್ರತಿಬಿಂಬಿಸುವ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)