

ಪುತ್ತೂರು ಗ್ರಾಮಾಂತರ: ಎರಡು ತಿಂಗಳ ಹಿಂದೆ ಕೊಳ್ತಿಗೆ ಗ್ರಾಮದ ಕಣಿಯಾರ್‌ಮಲೆ ಅರಣ್ಯ ಪ್ರದೇಶದ ತಪ್ಪಲಿನಲ್ಲಿರುವ ಕೆಎಎಫ್‌ಡಿಸಿ ರಬ್ಬರ್ ತೋಟದ ಆನಡ್ಕ ಎಂಬಲ್ಲಿ ಕಾಡಾನೆ ದಾಳಿಗೊಳಗಾಗಿ ಮೃತಪಟ್ಟಿದ್ದ ಕೆಎಫ್‌ಡಿಸಿಯ ನಿವೃತ್ತ ಕಾರ್ಮಿಕೆ, ಕೊಳ್ತಿಗೆ ಗ್ರಾಮದ ಕಣಿಯಾರು ಹರ್ತ್ಯಡ್ಕ ಸಿಆರ್‌ಸಿ ಕಾಜಿನಿ ನಿವಾಸಿ ಸೆಲ್ಲಮ್ಮ(65) ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20 ಲಕ್ಷ ರೂ. ಪರಿಹಾರ ಮಂಜೂರಾಗಿದೆ.
ಏಪ್ರಿಲ್ 29ರಂದು ಬೆಳಗ್ಗೆ ಸೆಲ್ಲಮ್ಮ ಕೆಎಫ್‌ಡಿಸಿಯ ಕಾರ್ಮಿಕರೊಬ್ಬರ ಪರವಾಗಿ ಬದಲಿ ಕಾರ್ಮಿಕೆಯಾಗಿ ಕಣಿಯಾರುಮಲೆ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಅಂಚಿನಲ್ಲಿರುವ ಕೆಎಫ್‌ಡಿಸಿಗೆ ಸೇರಿದ ರಬ್ಬರ್ ತೋಟಕ್ಕೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದ ವೇಳೆ ರಬ್ಬರ್ ತೋಟದ ಆನಡ್ಕ ಭಾಗದಲ್ಲಿ ಕಾಡಾನೆಯೊಂದು ದಾಳಿ ಮಾಡಿತ್ತು. ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಮೃತ ಸೆಲ್ಲಮ್ಮ ಅವರಿಗೆ ಪುತ್ರ, ಪುತ್ರಿ ಇದ್ದು, ಈ ಕುಟುಂಬಕ್ಕೆ ಶಾಸಕ ಅಶೋಕ್‌ಕುಮಾರ್ ರೈ ಅವರ ಶಿಫಾರಸ್ಸಿನಂತೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ಮಂಜೂರಾಗಿದೆ. ಶಾಸಕರು ಸೋಮವಾರ ಪರಿಹಾರ ಮಂಜೂರಾತಿ ಪತ್ರವನ್ನು ಸೆಲ್ಲಮ್ಮ ಅವರ ಪುತ್ರ ಟಿ.ಯೋಗರಾಜ ಹಾಗೂ ಪುತ್ರಿಗೆ ಹಸ್ತಾಂತರಿಸಿದರು. ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಉಪಸ್ಥಿತರಿದ್ದರು.