

ಹೆಬ್ರಿ: ಪೆರ್ಡೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 10 ಲಕ್ಷ ರೂ. ಅನುದಾನ ನೀಡುತ್ತೇನೆ. ಸಂಘ ಸಂಸ್ಥೆಗಳು ಸಮಾಜದ ದೀನ ದುರ್ಬಲರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಹೇಳಿದರು. ಪೆರ್ಡೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ವತಿಯಿಂದ ನೂತನ ಸಮುದಾಯ ಭವನದಲ್ಲಿ ನಡೆದ ಶ್ರೀ ವಿಶ್ವಕರ್ಮ ಯಜ್ಞ ಮಹಾಪೂಜೆ, 33ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ ಮಾತನಾಡಿದರು. ಪೆರ್ಡೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ವೆಂಕಟರಮಣ ಆಚಾರ್ಯ ಬುಕ್ಕಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಪುರೋಹಿತ್ ಕೀಳಿಂಜೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವಿದ್ಯಾರ್ಥಿ ವೇತನ ವಿತರಣೆ, ಅಶಕ್ತ ಕುಟುಂಬಗಳಿಗೆ ನೆರವು ಹಸ್ತಾಂತರ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಿತು. ಸಂಘದ ಕಟ್ಟಡ ಸಮಿತಿ ನೂತನ ಗೌರವಾಧ್ಯಕ್ಷ ಪಿ.ಎನ್.ದಿನೇಶ ಆಚಾರ್ಯ, ಅಧ್ಯಕ್ಷ ರವಿಕಿರಣ್ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಸುಕನ್ಯಾ ಆಚಾರ್ಯ, ಯುವ ವೃಂದದ ಅಧ್ಯಕ್ಷ ದಯಾನಂದ ಆಚಾರ್ಯ ಉಪಸ್ಥಿತರಿದ್ದರು. ಉಪೇಂದ್ರ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ರವೀಂದ್ರ ಆಚಾರ್ಯ ವಂದಿಸಿದರು.