

ನವದೆಹಲಿ: ಸುಮಾರು 17 ವರ್ಷಗಳ ನಂತರ ಟೀಮ್ ಇಂಡಿಯಾ ಎರಡನೇ ಬಾರಿ ಟಿ20 ವಿಶ್ವಕಪ್ ಎತ್ತಿಹಿಡಿದಿರುವುದು ಎಲ್ಲರಿಗೂ ಗೊತ್ತೇ ಇದೆ. ಕಳೆದ ಜೂನ್ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮ ನಾಯಕತ್ವದ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನದೊಂದಿಗೆ ವಿಶ್ವ ಚಾಂಪಿಯನ್ ಆಯಿತು. ಒಂದೇ ಒಂದು ಪಂದ್ಯವನ್ನು ಸೋಲದೆ ಕಪ್ ಗೆದ್ದುಕೊಂಡಿತು. 2023ರ ಏಕದಿನ ವಿಶ್ವಕಪ್ನಲ್ಲಿಯೂ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್ಗೆ ಎಂಟ್ರಿ ಕೊಟ್ಟು ಕೊನೆಯ ಹಂತದಲ್ಲಿ ಸೋತು ಭಾರಿ ನೋವು ಅನುಭವಿಸಿದ್ದ ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್ ಗೆಲುವು ಖುಷಿ ಕೊಟ್ಟಿತು.
ಟಿ20 ವಿಶ್ವಕಪ್ ಗೆಲುವಿನ ಹಿಂದೆ ಎಲ್ಲಾ ಆಟಗಾರರ ಶ್ರಮ ಇರುವುದು ನಿಜ. ಆದರೆ, ನಾಯಕ ರೋಹಿತ್ ಶರ್ಮ ಪ್ರಕಾರ ಟಿ20 ವಿಶ್ವಕಪ್ ಯಶಸ್ಸಿಗೆ ಈ ಮೂವರು ಪ್ರಮುಖ ಆಧಾರ ಸ್ತಂಭಗಳು ಎಂದಿದ್ದಾರೆ. ಅಷ್ಟಕ್ಕೂ ಆ ಮೂವರು ಪಿಲ್ಲರ್ಗಳು ಯಾರು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಮುಂಬೈನಲ್ಲಿ ಬುಧವಾರ (ಆ.21) ಸಿಯೆಟ್ (CEAT) ಕ್ರಿಕೆಟ್ ಅವಾರ್ಡ್ ಕಾರ್ಯಕ್ರಮ ನಡೆಯಿತು. ಇದರಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಭಾಗವಹಿಸಿದ್ದರು. ರೋಹಿತ್ ಅವರು ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರೋಹಿತ್, ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್, ಬಿಸಿಸಿಐ ಕಾರ್ಯದರ್ಶಿ ಜಯ ಷಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಟಿ20 ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣ ಎಂದು ಘೋಷಿಸಿದರು.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ಸೋತ ನಂತರ ಈ ಮೂವರು ತಂಡವನ್ನು ಸಹಜ ಸ್ಥಿತಿಗೆ ತರಲು ತುಂಬಾ ಶ್ರಮಿಸಿದರು. ಆ ನೋವಿನಿಂದ ಹೊರಬರಲು ಅವರು ಪಟ್ಟ ಕಷ್ಟ ಇಂದು ಟಿ20 ವಿಶ್ವಕಪ್ ಟ್ರೋಫಿ ಬರುವಂತೆ ಮಾಡಿದೆ ಎಂದು ರೋಹಿತ್ ಹೇಳಿದರು.
ಇನ್ನು ಇಡೀ ಟೂರ್ನಿಯಲ್ಲಿ ರೋಹಿತ್ ಶರ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಗೊತ್ತೇ ಇದೆ. ದಕ್ಷಿಣಾ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಸೂಪರ್ ಬೌಲಿಂಗ್ನಿಂದ ಟೀಮ್ ಇಂಡಿಯಾ ಕಪ್ ಗೆದ್ದುಕೊಂಡಿತು. ಇಡೀ ಟೂರ್ನಿಯಲ್ಲಿ ವಿಫಲರಾಗಿದ್ದ ಕೊಹ್ಲಿ ಕೂಡ ಫೈನಲ್ನಲ್ಲಿ ಕಮ್ಬ್ಯಾಕ್ ಮಾಡಿದರು. ಅಂತಿಮವಾಗಿ ಟೀಮ್ ಇಂಡಿಯಾ ರೋಚಕ ಜಯ ದಾಖಲಿಸಿ ಟಿ20 ಟ್ರೋಫಿಯನ್ನು ಎತ್ತಿ ಹಿಡಿಯಿತು. (ಏಜೆನ್ಸೀಸ್)