ಪಂದ್ಯದ ನಡುವೆ ಮೈದಾನದೊಳಗೆ ನುಗ್ಗಿದ ರೋಹಿತ್​ ಶರ್ಮ ಅಭಿಮಾನಿಗೆ ಬಿತ್ತು ಭಾರಿ ದಂಡ!?

Rohit Fan
Published on

ನವದೆಹಲಿ: ಭಾರತದಲ್ಲಿ ಕ್ರಿಕೆಟಿಗರಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ. ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ದೇವರಂತೆ ಪೂಜಿಸುವವರು ಇದ್ದಾರೆ. ಅಲ್ಲದೆ, ತಾವು ಆರಾಧಿಸುವ ಆಟಗಾರರನ್ನು ಹತ್ತಿರದಿಂದ ಮಾತನಾಡಿಸಿ, ಒಂದು ಬಾರಿ ಅಪ್ಪಿಕೊಳ್ಳಲು ಆಸೆಪಟ್ಟು ಪಂದ್ಯದ ನಡುವೆಯೇ ಮೈದಾನಕ್ಕೆ ನುಗ್ಗಿದ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.

ನಿನ್ನೆ (ನ.06)ಯಷ್ಟೇ ನಡೆದ ಜಿಂಬಾಂಬ್ವೆ ಮತ್ತು ಭಾರತ ನಡುವಿನ ಟಿ20 ವಿಶ್ವಕಪ್​ನ ಸೂಪರ್​ 12 ಹಂತದ ಪಂದ್ಯಲ್ಲಿಯೂ ಇಂಥದ್ದೇ ಸನ್ನಿವೇಶವೊಂದು ಜರುಗಿತು. ಟೀಮ್​ ಇಂಡಿಯಾದ ನಾಯಕ ಹಾಗೂ ಹಿಟ್​ ಮ್ಯಾನ್​ ರೋಹಿತ್​​ ಅವರನ್ನು ಹತ್ತಿರದಿಂದ ನೋಡಿ, ಮಾತನಾಡಿಸಲು ಬಾಲ ಅಭಿಮಾನಿಯೊಬ್ಬ ಮೈದಾನಕ್ಕೆ ನುಸುಳಿದ ಪ್ರಸಂಗಕ್ಕೆ ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​ ಸಾಕ್ಷಿಯಾಯಿತು.

ಬಿಂಬಾಬ್ವೆ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ 16ನೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಬಾಲಕನೊಬ್ಬ ಭಾರತದ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಮೈದಾನಕ್ಕೆ ನುಗ್ಗಿದ. ಭಧ್ರತಾ ಸಿಬ್ಬಂದಿಗಳ ಅರಿವಿಗೆ ಬಾರದಂತೆ ಬಾಲಕ ಮೈದಾನದ ಒಳಬಂದು ರೋಹಿತ್​ ಶರ್ಮಾ ಬಳಿ ಬಂದಿದ್ದ. ತಕ್ಷಣ ಎಚ್ಚೆತ್ತ ಸಿಬ್ಬಂದಿ, ಬಾಲಕನನ್ನು ತಡೆದು ಕರೆದೊಯ್ದರು. ಇದರಿಂದಾಗಿ ಕೂದಲೆಳೆ ಅಂತರದಲ್ಲಿ ಬಾಲಕನಿಗೆ ತನ್ನ ನೆಚ್ಚಿನ ಆಟಗಾರ​ನನ್ನು ಭೇಟಿಯಾಗುವ ಅವಕಾಶ ತಪ್ಪಿದೆ.

ಇದೀಗ ಬಂದ ವರದಿಗಳ ಪ್ರಕಾರ ಪಂದ್ಯದ ನಡುವೆಯೇ ಮೈದಾನಕ್ಕೆ ಅತಿಕ್ರಮ ಪ್ರವೇಶ ಮಾಡಿದ ರೋಹಿತ್​ ಶರ್ಮಾರ ಅಭಿಮಾನಿಗೆ 6.5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಟೇಡಿಯಂನಲ್ಲಿ ಪ್ರೇಕ್ಷಕರು ನಿವರ್ಹಿಸಬೇಕಾದ ಶಿಸ್ತನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ.

ಬಾಲಕ ಮೈದಾನಕ್ಕೆ ನುಸುಳಿದ್ದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ರೋಹಿತ್ ಶರ್ಮಾ ನಡೆಯನ್ನು ಟೀಕಿಸುತ್ತಿದ್ದಾರೆ. ಅಷ್ಟು ಹತ್ತಿರ ಬಂದ ಬಾಲಕನನ್ನು ಮಾತನಾಡಿಸದೆ ರೋಹಿತ್ ಸುಮ್ಮನಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಭಾರತ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 186 ರನ್​ ಕಲೆಹಾಕಿತು. ಭಾರತ ನೀಡಿದ 187 ರನ್​ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ 17.2 ಓವರ್​ಗಳಲ್ಲೇ 115ರನ್​ಗೆ ಸರ್ವಪತನ ಕಂಡಿತು. ಟೀಮ್​ ಇಂಡಿಯಾ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್​ ಪ್ರವೇಶಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net