ರೋಹಿತ್ ಶರ್ಮ ಸ್ಪೈ ಮಾಡುತ್ತಿದ್ದಾರೆ ಎಂದ ಪತ್ನಿ ರಿತಿಜಾ..!

ROHIT SHARM
Published on

ಸೌಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದ ಮೊದಲ ದಿನದಾಟ ಮಳೆಯಿಂದ ರದ್ದುಗೊಂಡಿತ್ತು. ಶನಿವಾರ ಆರಂಭಗೊಂಡ 2ನೇ ದಿನದಾಟಕ್ಕೂ ಪದೆ ಪದೆ ಮಂದ ಬೆಳಕು ಅಡ್ಡಿಯುಂಟು ಮಾಡಿತು. ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಭಾರತ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ ಜೋಡಿ ಎಚ್ಚರಿಕೆಯ ಆರಂಭ ನೀಡಿತು. 68 ಎಸೆತಗಳಲ್ಲಿ 34 ರನ್‌ಗಳಿಸಿ ರೋಹಿತ್ ಶರ್ಮ ಪೆವಿಲಿಯನ್ ಸೇರಿಕೊಂಡರು. ಬಳಿಕ ಪೆವಿಲಿಯನ್‌ನಲ್ಲಿ ಕುಳಿತು ಪಂದ್ಯವನ್ನು ಹತ್ತಿರದಿಂದ ವೀಕ್ಷಿಸುವ ಸಲುವಾಗಿ ಬೈನಾಕ್ಯುಲರ್ ಉಪಯೋಗಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮ ಪತ್ನಿ ರಿತಿಕಾ ಸಜ್‌ದೇವ್, ಪಂದ್ಯ ನೋಡುತ್ತಿದ್ದೀರಾ ಅಥವಾ ನಮ್ಮ ಮೇಲೆ ಸ್ಪೈ ಕೆಲಸ ಮಾಡುತ್ತಿದ್ದೀರಾ ಎಂದು ಕಾಲೆಳೆದಿದ್ದಾರೆ.

ತಂಡದ ಆಟಗಾರರ ಕುಟುಂಬ ಸದಸ್ಯರು ಸೌಥಾಂಪ್ಟನ್ ಸ್ಟೇಡಿಯಂಗೆ ಹೊಂದಿಕೊಂಡಂತೆ ಇರುವ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದಾರೆ. ಮೈದಾನಕ್ಕೆ ಯಾರಿಗೂ ಪ್ರವೇಶ ನೀಡದ ಕಾರಣ, ಎಲ್ಲರೂ ಹೋಟೆಲ್‌ನಿಂದಲೇ ಪಂದ್ಯ ವೀಕ್ಷಿಸುತ್ತಿದ್ದಾರೆ. ಸೌಥಾಂಪ್ಟನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಮುಕ್ತಾಯಗೊಂಡ ಬಳಿಕ ಭಾರತದ ಆಟಗಾರರಿಗೆ ಇಂಗ್ಲೆಂಡ್‌ನಲ್ಲೇ 20 ದಿನಗಳ ಕಾಲ ಬಿಡುವು ನೀಡಲಾಗಿದೆ. ಆಗಸ್ಟ್ 4 ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 217 ರನ್‌ಗಳಿಗೆ ಸರ್ವಪತನ ಕಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net