ನವದೆಹಲಿ: ಜುಲೈ 27ರಂದು ಶ್ರೀಲಂಕಾ ವಿರುದ್ಧ ಆರಂಭಗೊಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಕ್ಲೀನ್ಸ್ವೀಪ್ ಸಾಧಿಸಿದ್ದು, ನೂತನ ನಾಯಕ ಸೂರ್ಯಕುಮಾರ್ ಕ್ಯಾಪ್ಟನ್ಸಿಯನ್ನು ಹಲವರು ಪ್ರಶಂಶಿಸಿದ್ದಾರೆ. ಆತಿಥೇಯ ಶ್ರೀಲಂಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವ ಮಾಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಮಾಜಿ ನಾಯಕ ಮೊಹಮ್ಮದ್ ಕೈಫ್ ಸೂರ್ಯಕುಮಾರ್ ಯಾದವ್ರನ್ನು ರೋಹಿತ್ ಚೇಲಾ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಬರೆದುಕೊಂಡಿರುವ ಮೊಹಮ್ಮದ್ ಕೈಫ್, ಸೂರ್ಯಕುಮಾರ್ ಯಾದವ್ ರೋಹಿತ್ ಶರ್ಮರ ಚೇಲಾ ಎಂದರೆ ಯಾವುದೇ ತಪ್ಪಿಲ್ಲ. ಏಕೆಂದರೆ 19 ನೇ ಓವರ್ ರಿಂಕು ಸಿಂಗ್ರಿಂದ, 20 ಓವರ್ನಲ್ಲೇ ಆತ ಸ್ವಯಂ ಬೌಲಿಂಗ್ ಮಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಒಬ್ಬ ಮಹಾನ್ ನಾಯಕ ಎನ್ನಿಸಿಕೊಳ್ಳಲು ಇದಕ್ಕಿಂತ ಇನ್ನೇನು ಬೇಕು ಎಂದು ಬರೆದುಕೊಂಡಿದ್ದಾರೆ.
ಇತ್ತ ಮೊಹಮ್ಮದ್ ಕೈಫ್ ಅವರ ಟ್ವೀಟ್ ವೈರಲ್ ಆಗಿದ್ದು, ಹಲವರು ಸೂರ್ಯಕುಮಾರ್ ಯಾದವ್ ಅವರ ನಾಯಕತ್ವ ಹಾಗೂ ಕೈಫ್ ಅವರು ಅದನ್ನು ಬಣ್ಣಿಸಿರುವ ರೀತಿಯನ್ನು ಹಾಡಿಹೊಗಳುತ್ತಿದ್ದಾರೆ. ರೋಹಿತ್ ಶರ್ಮಾ ನಿವೃತ್ತರಾದ ಬಳಿಕ ಸೂರ್ಯಕುಮಾರ್ ಯಾದವ್ ಅವರನ್ನೇ ಏಕದಿನ ಹಾಗೂ ಟೆಸ್ಟ್ ಮಾದರಿಗೆ ನಾಯಕನನ್ನಾಗಿ ಮಾಡಿ. ತಂಡದ ಭವಿಷ್ಯದ ನಿಟ್ಟಿನಲ್ಲಿ ಬಿಸಿಸಿಐ ಸೂರ್ಯ ಅವರಿಗೆ ಹೆಚ್ಚಿನ ಮಣೆ ಹಾಕುವುದು ಸೂಕ್ತ ಎಂದು ಹಲವರು ಕಮೆಂಟ್ ಮಾಡಿದ್ದಾರೆ.