ರೋಹಿತ್ ಶರ್ಮ ಗಾಯದ ಬಗ್ಗೆ ವಿರಾಟ್​ ಕೊಹ್ಲಿಗೂ ಮಾಹಿತಿ ಇಲ್ಲ!

virat rohit web
Published on

ಸಿಡ್ನಿ: ರೋಹಿತ್ ಶರ್ಮ ಗಾಯದ ಬಗ್ಗೆ ತಮಗೂ ಸಾಕಷ್ಟು ಗೊಂದಲಗಳಿವೆ ಮತ್ತು ಮಾಹಿತಿಯ ಕೊರತೆಯಿಂದಾಗಿ ಅವರ ಲಭ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಆಸೀಸ್ ಪ್ರವಾಸದ ಮೊದಲ ಪಂದ್ಯಕ್ಕೆ ಪೂರ್ವಭಾವಿಯಾಗಿ ಕೊಹ್ಲಿ, ರೋಹಿತ್ ಗಾಯದ ಬಗೆಗಿನ ಗೊಂದಲದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರೋಹಿತ್ ಶರ್ಮ ಗಾಯದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಐಪಿಎಲ್ ವೇಳೆ ಆದ ಗಾಯದಿಂದಾಗಿ ಅವರು ಅಲಭ್ಯರಾಗಿದ್ದಾರೆ ಎಂದು ಆಯ್ಕೆ ಸಮಿತಿ ಸಭೆಗೆ ಮುನ್ನ ಹೇಳಲಾಗಿತ್ತು. ನಂತರ ಐಪಿಎಲ್‌ನಲ್ಲಿ ಆಡಿದಾಗ ಅವರು ಆಸೀಸ್‌ಗೆ ನಮ್ಮ ಜತೆ ಪ್ರಯಾಣಿಸುತ್ತಾರೆ ಎಂದೇ ತಿಳಿದಿದ್ದೆವು. ಆದರೆ ಅವರು ವಿಮಾನ ಏರದ ಬಗ್ಗೆ ನಮಗೆ ಯಾವುದೇ ಕಾರಣಗಳನ್ನು ವಿವರಿಸಲಿಲ್ಲ’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಬೆಂಗಳೂರಿನ ಎನ್‌ಸಿಎಯಲ್ಲಿ ರೋಹಿತ್ ಅವರ ಮುಂದಿನ ಫಿಟ್ನೆಸ್ ಪರೀಕ್ಷೆ ಡಿಸೆಂಬರ್ 11ರಂದು ನಡೆಯಲಿದ್ದು, ನಾವೀಗ ಆಸೀಸ್‌ನಲ್ಲಿ ಕುಳಿತು ಅವರಿಗಾಗಿ ಕಾಯುತ್ತಿದ್ದೇವೆ. ಆದರೆ ಈ ಅಸ್ಪಷ್ಟತೆ ಉತ್ತಮವಾದುದಲ್ಲ ಎಂದು ಕೊಹ್ಲಿ ಪರೋಕ್ಷವಾಗಿ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೃದ್ಧಿಮಾನ್ ಸಾಹ ಅವರಂತೆ ರೋಹಿತ್ ಮತ್ತು ಇಶಾಂತ್ ಶರ್ಮ ಅವರು ರಾಷ್ಟ್ರೀಯ ತಂಡದ ಜತೆಗಿದ್ದೇ ಪುನಶ್ಚೇತನದಲ್ಲಿ ಪಾಲ್ಗೊಳ್ಳಬಹುದಿತ್ತು ಎಂದೂ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net