

ಬೆಂಗಳೂರು: ಸಹಜವಾಗಿ ಸಿನಿಮಾ ಮಂದಿಯೆಂದರೆ ಸಾಮಾನ್ಯರಿಗೆ ಒಂದು ರೀತಿ ಅಚ್ಚರಿ. ಅವರು ಏನೇ ಮಾಡಿದರೂ ಬೆರಗುಗಣ್ಣಿನಿಂದಲೇ ನೋಡುತ್ತಾರೆ. ಅದರಲ್ಲೂ ಸಿನಿಮಾದವರ ಪ್ರೀತಿ ಪ್ರೇಮದ ವಿಚಾರ ಬಂದಾಗ ಕುತೂಹಲ ತುಸು ಜಾಸ್ತಿನೇ ಆಗುತ್ತದೆ. ಸ್ಯಾಂಡಲ್ವುಡ್ ಸೆನ್ಷೆಷನಲ್ ಜೋಡಿ ಯಶ್-ರಾಧಿಕಾ ವಿಚಾರದಲ್ಲೂ ಆಗಿದ್ದು ಅದೇ. ಹಾಗಾದರೆ, ಯಶ್ಗೆ ರಾಧಿಕಾ ಪ್ರಪೋಸ್ ಮಾಡಿದ್ದಾ ಅಥವಾ ರಾಧಿಕಾಗೆ ಯಶ್ ಪ್ರೇಮನಿವೇದನೆ ಮಾಡಿದ್ರಾ? ಆ ಪ್ರೇಮನಿವೇದನೆ ಹೇಗಿತ್ತು?
ರಾಧಿಕಾ ಮತ್ತು ಯಶ್ ಒಟ್ಟಿಗೆ ಕರಿಯರ್ ಆರಂಭಿಸಿದವರು. ಸಿನಿಮಾಕ್ಕೂ ಒಟ್ಟಿಗೆ ಬಂದವರು. ಒಟ್ಟಿಗೆ ಹಲವು ಸಿನಿಮಾ ಮಾಡಿ, ಇದೀಗ ಒಟ್ಟಾಗಿಯೇ ಬಾಳ ಪಯಣದಲ್ಲಿ ಸಾಗಿದ್ದಾರೆ. ಅದೆಲ್ಲ ಒತ್ತಟ್ಟಿಗಿರಲಿ. ಈ ಜೋಡಿಯ ಪ್ರೇಮನಿವೇದನೆಯೇ ಒಂದು ರೀತಿ ಮಜವಾಗಿದೆ. ಅದನ್ನು ಸ್ವತಃ ಯಶ್ ಹೇಳಿಕೊಂಡಿದ್ದಾರೆ. ‘ಫೋನ್ ಕೈಗೆತ್ತಿಕೊಂಡು.. ತುಂಬ ದಿನದಿಂದ ಒಂದು ವಿಷ್ಯಾ ಹೇಳ್ಬೇಕಿತ್ತು.. ಹೇಳ್ಲಾ.. ಅದೂ ಅದು.. ನಾವಿಬ್ರು ಮದ್ವೆ ಆಗೋಣ್ವಾ..’ ಎಂದು ನೇರವಾಗಿ ರಾಧಿಕಾಗೆ ಪ್ರಪೋಸ್ ಮಾಡಿದ್ದರಂತೆ ಯಶ್. ಅದಕ್ಕೆ ರಾಧಿಕಾ ಸಹ ಹೀಗೆ ಪ್ರತಿಕ್ರಿಯಿಸಿದ್ದರು. ‘ಫೋನ್ನಲ್ಲಿ ಹೀಗಾ ಪ್ರಪೋಸ್ ಮಾಡೋದು..’ ಎಂದಿದ್ದರಂತೆ. ಬದಲಿಗೆ ಕೈಯಲ್ಲಿ ರೋಸ್ ಹಿಡಿದು, ಕಣ್ಣಲ್ಲಿ ಕಣ್ಣಿಟ್ಟು, ಪ್ರಪೋಸ್ ಮಾಡಬೇಕಿತ್ತಂತೆ. ಹಾಗಾಗಿ ಆ ಆಸೆಯನ್ನೂ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಸಿನಿಮಾದಲ್ಲಿ ದೃಶ್ಯವೊಂದನ್ನು ಸೃಷ್ಟಿಸಿ ಲವ್ ಯೂ ಎಂದಿದ್ದರು ಯಶ್.
ಅಂದಹಾಗೆ, ಶನಿವಾರ ಸಂಜೆ ಕಲರ್ಸ್ ಕನ್ನಡದಲ್ಲಿ ‘ಕಲರ್ಸ್ ಸಿನಿಮಾ ಗೌರವ’ ಕಾರ್ಯಕ್ರಮವನ್ನು ಮರುಪ್ರಸಾರ ಮಾಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ರಾಧಿಕಾಗೆ ಹೇಗೆ ಪ್ರಪೋಸ್ ಮಾಡಿದ್ದೆ ಎಂಬುದನ್ನು ಯಶ್ ಹೇಳಿಕೊಂಡಿದ್ದರು.