ಒಳಮೊಗ್ರು ಪಂಚಾಯಿತಿಯಿಂದ ರಸ್ತೆ ಸುರಕ್ಷತಾ ಕಾರ್ಯ : ಟ್ರಾಫಿಕ್ ಸೇಫ್ಟೀಕೋನ್ ಅಳವಡಿಕೆ : ವಾಹನಗಳ ನಿಯಮಬಾಹಿರ ಟರ್ನಿಂಗ್ ವ್ಯವಸ್ಥೆಗೆ ಬ್ರೇಕ್

New Project (5)
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ರಸ್ತೆ ಸರ್ಕಲ್‌ಗಳ ಬಳಿ ವಾಹನ ಸವಾರರು ಸರ್ಕಲ್‌ಗೆ ಸುತ್ತು ಬಳಸಿ ತಿರುವು ಪಡೆದುಕೊಳ್ಳಬೇಕೆಂಬ ನಿಯಮವಿದ್ದರೂ ಒಳಮೊಗ್ರು ಗ್ರಾಮದ ಕುಂಬ್ರ ಜಂಕ್ಷನ್ ಬಳಿ ಈ ನಿಯಮದ ಕಡ್ಡಾಯ ಪಾಲನೆಯಾಗುತ್ತಿರಲಿಲ್ಲ. ಇಲ್ಲಿನ ಅವೈಜ್ಞಾನಿಕ ತಿರುವು ವ್ಯವಸ್ಥೆಯಿಂದಾಗಿ ನಿರಂತರವಾಗಿ ವಾಹನ ಅಪಘಾತಗಳು ನಡೆಯುವ ಮೂಲಕ ಅಪಘಾತ ವಲಯವಾಗಿ ಪರಿವರ್ತನೆಗೊಂಡಿತ್ತು. ಇದೀಗ ಒಳಮೊಗ್ರು ಗ್ರಾಪಂ ಆಡಳಿತ ಕೊನೆಗೂ ಕಾನೂನು ಬಾಹಿರ ವಾಹನ ತಿರುವು ವ್ಯವಸ್ಥೆಗೆ ಬ್ರೇಕ್ ಹಾಕಿದೆ.

ಕಂಬ್ರ ಜಂಕ್ಷನ್‌ನಲ್ಲಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮಾಡಾವು- ಬೆಳ್ಳಾರೆ ರಸ್ತೆ ಸಂಪರ್ಕದ ಭಾಗದಲ್ಲೇ ‘ಕುಂಬ್ರ ಕಟ್ಟೆ’ ಸರ್ಕಲ್ ಇದೆ. ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಬೆಳ್ಳಾರೆ ರಸ್ತೆ ಕವಲೊಡೆಯುವ ನಡುವಣ ಭಾಗದಲ್ಲಿ ರಿಕ್ಷಾ ಪಾರ್ಕಿಂಗ್ ಸ್ಥಳವಿದೆ. ಸುಳ್ಯ ಕಡೆಯಿಂದ ಮಾಣಿ ಮೈಸೂರು ಹೆದ್ದಾರಿಯಲ್ಲಿ ಬಂದು ಬೆಳ್ಳಾರೆ ಕಡೆಗೆ ಸಾಗುವ ಮತ್ತು ಬೆಳ್ಳಾರೆ ರಸ್ತೆಯಲ್ಲಿ ಬೆಳ್ಳಾರೆ- ಮಾಡಾವು ಕಡೆಯಿಂದ ಬಂದು ಸುಳ್ಯ ಕಡೆಗೆ ತೆರಳುವ ಹೆಚ್ಚಿನ ವಾಹನಗಳು ‘ಸರ್ಕಲ್’ ಮೂಲಕ ಸುತ್ತು ಬಳಸಿಕೊಂಡು ತಿರುವು ಪಡೆದುಕೊಳ್ಳದೆ ನಿಯಮ ಉಲ್ಲಂಘಿಸಿ ನೇರವಾಗಿ ರಿಕ್ಷಾ ಪಾರ್ಕಿಂಗ್ ಸ್ಥಳದ ಬದಿ ಮತ್ತು ಅಂಗಡಿ ಕಟ್ಟಡಗಳ ನಡುವಣ ಭಾಗದಲ್ಲಿ ತಿರುವು ಪಡೆದುಕೊಳ್ಳುತ್ತಿರುವುದು ಸಮಸ್ಯೆಗೆ ಕಾರಣವಾಗಿತ್ತು.

ವರದಿಗೆ ಸ್ಪಂದನೆ: ಅವೈಜ್ಞಾನಿಕ ತಿರುವು ವ್ಯವಸ್ಥೆಯಿಂದಾಗಿ ನಿರಂತರವಾಗಿ ಅಪಘಾತಗಳು ನಡೆಯುತ್ತಿರುವ ಕುರಿತು ಹಾಗೂ ಸಾರ್ವಜನಿಕರಿಗಾಗುತ್ತಿದ್ದ ಸಮಸ್ಯೆ ಬಗ್ಗೆ ‘ವಿಜಯವಾಣಿ’ ಆಗಸ್ಟ್ ಕೊನೇ ವಾರದಲ್ಲಿ ಸಮಗ್ರ ವರದಿ ಪ್ರಕಟಿಸಿ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಇದೀಗ ಒಳಮೊಗ್ರು ಗ್ರಾಪಂ ಟ್ರಾಫಿಕ್ ಸೇಫ್ಟೀಕೋನ್‌ಗಳನ್ನು ಅಳವಡಿಸುವ ಮೂಲಕ ವಾಹನಗಳ ಅವೈಜ್ಞಾನಿಕ ತಿರುವು ವ್ಯವಸ್ಥೆಗೆ ಬ್ರೇಕ್ ಹಾಕಿದೆ.

ಸಂಚಾರ ಸುರಕ್ಷತೆ ದೃಷ್ಟಿಯಿಂದ ಗ್ರಾಮ ಪಂಚಾಯಿತಿ ವತಿಯಿಂದ ಟ್ರಾಫಿಕ್ ಸೇಫ್ಟೀಕೋನ್‌ಗಳನ್ನು ಅಳವಡಿಸಿದ್ದೇವೆ. ವಾಹನ ಸವಾರರರು ಸಂಚಾರ ನಿಯಮಗಳನ್ನು ಪಾಲಿಸಿ ಪಂಚಾಯಿತಿಯೊಂದಿಗೆ ಸಹಕರಿಸಬೇಕು. ಜನತೆ ಜವಾಬ್ದಾರಿ ವಹಿಸಿದರೆ ಮಾತ್ರ ಅಳವಡಿಸಿದ ವ್ಯವಸ್ಥೆ ಉಳಿಯಲು ಸಾಧ್ಯ. ತ್ರಿವೇಣಿ ಪಲ್ಲತ್ತಾರು, ಒಳಮೊಗ್ರು ಗ್ರಾಪಂ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net