ಹಾನಿಯಾದ ರಸ್ತೆ ದುರಸ್ತಿಗೆ ಪಟ್ಟು

New Project (6)
Published on

ಸುಳ್ಯ: ಕುಡಿಯುವ ನೀರಿನ ಪೈಪ್, ಕೇಬಲ್ ಅಳವಡಿಕೆ ವೇಳೆ ಹಾನಿಯಾದ ರಸ್ತೆ ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಕುರಿತು ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಕಾಂಗ್ರೆಸ್ ನಿಯೋಗ ಲೋಕೋಪಯೋಗಿ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದೆ.

ಈ ಕುರಿತು ಅಗತ್ಯ ಕಾಮಗಾರಿಗಳಿಗೆ ತುರ್ತು ಪ್ರಸ್ತಾವನೆ ಸಲ್ಲಿಸಲು ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು ನೇತೃತ್ವದ ಕಾಂಗ್ರೆಸ್ ನಿಯೋಗ ಸುಳ್ಯ ಲೋಕೋಪಯೋಗಿ ಇಲಾಖೆ ಉಪ ವಿಭಾಗಕ್ಕೆ ಭೇಟಿ ನೀಡಿ ಸಲಹೆ ನೀಡಿತು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋಪಾಲ್ ಮತ್ತು ಸಹಾಯಕ ಇಂಜಿನಿಯರ್ ಪರಮೇಶ್ವರ್ ಬಳಿ ಈ ಕುರಿತು ಚರ್ಚಿಸಿ ಸುಳ್ಯ ತಾಲೂಕಿನ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ರಸ್ತೆಗಳ ಬದಿಯಲ್ಲಿ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಮತ್ತು ವಿದ್ಯುತ್ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ನಡೆಸುತ್ತಿದ್ದು, ಇದರಿಂದಾಗಿ ರಸ್ತೆ ಹಾನಿಯಾಗಿರುವ ಕುರಿತು ಅಂದಾಜು ಪಟ್ಟಿ ತಯಾರಿಸಿ ಉಂಟಾಗಿರುವ ನಷ್ಟವನ್ನು ೋಷಿಸಬೇಕು ಮತ್ತು ಅದರ ಮರುಸ್ಥಾಪನೆಗೆ ಅಂದಾಜು ಪಟ್ಟಿ ತಯಾರಿಸಬೇಕು. ಹಾನಿ ಮಾಡಿರುವ ಇಲಾಖೆ ಅಥವಾ ಗುತ್ತಿಗೆದಾರರಿಂದ ಕೂಡಲೇ ದುರಸ್ತಿ ಕಾರ್ಯವಾಗಬೇಕು ಎಂದು ಆಗ್ರಹಿಸಿದರು. ತಾಲೂಕಿನ ಇತರ ಪ್ರಮುಖ ರಸ್ತೆಗಳ ದುರಸ್ತಿ ಮತ್ತು ಹೊಸ ಕಾಮಗಾರಿಗಳಿಗೆ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಮಟ್ಟದಲ್ಲಿ ಒತ್ತಡ ತರುವ ಪ್ರಯತ್ನ ಮಾಡುತ್ತೇವೆ ಎಂದು ಬೊಳ್ಳೂರು ಭರವಸೆ ನೀಡಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಆಲೆಟ್ಟಿ ಗ್ರಾಪಂ ಸದಸ್ಯ ಸತ್ಯಕುಮಾರ್ ಆಡಿಂಜ, ನಪಂ ಮಾಜಿ ಉಪಾಧ್ಯಕ್ಷ ಗೋಕುಲ್‌ದಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ., ವಿಜಯ ಕುಮಾರ್ ಆಲೆಟ್ಟಿ ಉಪಸ್ಥಿತರಿದ್ದರು.

ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಮನವಿ

ಮಳೆಗಾಲದ ರಸ್ತೆ ಬದಿ ಚರಂಡಿ ಸ್ವಚ್ಛಗೊಳಿಸುವ ಕಾರ್ಯವನ್ನು ಆದಷ್ಟು ಬೇಗ ಮುಗಿಸಬೇಕು. ಮಳೆಗಾಲ ಮುಗಿದ ಕೂಡಲೇ ಅನುಮೋದನೆಗೊಂಡಿರುವ ಇತರ ಕಾಮಗಾರಿಗಳನ್ನು ಸಮಯಮಿತಿಯಲ್ಲಿ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net