ಬಿಸ್ಲೆ ರಸ್ತೆಗೆ ಕೊನೆಗೂ ದುರಸ್ತಿ ಯೋಗ! : ಸುಬ್ರಹ್ಮಣ್ಯ ಸಂಪರ್ಕಿಸುವ ಪ್ರಮುಖ ಮಾರ್ಗ : ವಾಹನ ಸಂಚಾರವೇ ಸಾಹಸ

20-2
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಬಹುಕಾಲದ ಬೇಡಿಕೆಯಾಗಿದ್ದ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ-ಬಿಸ್ಲೆ ಘಾಟ್ ಸಂಪರ್ಕಿಸುವ ರಸ್ತೆಗೆ ಕೊನೆಗೂ ದುರಸ್ತಿ ಭಾಗ್ಯ ದೊರೆತಿದೆ.

ಸುಬ್ರಹ್ಮಣ್ಯದಿಂದ ಕುಲ್ಕುಂದ ಭಾಗವಾಗಿ ಹಾಸನ ಜಿಲ್ಲಾ ವ್ಯಾಪ್ತಿಯ ಬಿಸ್ಲೆ ಘಾಟ್‌ಗೆ ಈ ರಸ್ತೆ ಸಂಪರ್ಕಿಸುತ್ತಿದ್ದು, ಬಿಸ್ಲೆ ಘಾಟ್ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಸುಮಾರು 4.5 ಕಿ.ಮೀ ತನಕ ರಸ್ತೆ ತೀವ್ರ ಹದಗೆಟ್ಟಿದ್ದು, ಇಲಾಖೆಯ ಸಮಸ್ಯೆಯಿಂದಾಗಿ ದುರಸ್ತಿ ಕಾರ್ಯ ಕೈಗೊಳ್ಳಲು ವಿಳಂಬವಾಗಿತ್ತು.

ವಾಹನ ಸವಾರರಿ ಈ ನಾಲ್ಕು ಕಿಲೋ ಮೀಟರ್ ಕ್ರಮಿಸುವುದೇ ಅತಿ ದೊಡ್ಡ ಸಾಹಸವಾಗಿದ್ದು, ಹೊಂಡಗುಂಡಿಗಳ ಜತೆಗೆ ಕಿರಿದಾಗಿರುವುದರಿಂದ ಭಾರಿ ವಾಹನಗಳ ಸಂಚಾರ ಕಷ್ಟವಾಗಿದೆ. ಈ ಭಾಗದ ರಸ್ತೆಯ ಅರಿವಿಲ್ಲದೇ ವಾಹನಗಳು ಅತಿ ವೇಗದಿಂದ ಬರುತ್ತಿದ್ದು, ಅಪಘಾತನಗಳು ಮಾಮೂಲಾಗಿವೆ. ಪ್ರಸ್ತುತ ರಸ್ತೆ ಅಭಿವೃದ್ಧಿ ಆರಂಭಗೊಂಡಿದ್ದು, ಅವಘಡಗಳಿಗೆ ತಡೆ ಬೀಳುವ ನಿರೀಕ್ಷೆ ಮೂಡಿದೆ.

3.5 ಕೋಟಿ ರೂ. ಮಂಜೂರು

ಬಿಸ್ಲೆ ಘಾಟ್ ರಸ್ತೆ ಅಭಿವೃದ್ಧಿಗಿದ್ದ ತೊಡಕುಗಳು ಈಗಾಗಲೇ ನಿವಾರಣೆಗೊಂಡಿದೆ. ಈಗಾಗಲೇ ಅಭಿವೃದ್ಧಿ ಕಾರ್ಯ ಆರಂಭಗೊಂಡಿದ್ದು, ವಿವಿಧ ಕಡೆಗಳಲ್ಲಿ ಮೋರಿ ಅಳವಡಿಕೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬಿಸಿಲೆಗೆ ಇದು ಪ್ರಧಾನ ಸಂಪರ್ಕ ಕೊಂಡಿಯಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಘಟಕ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ 20 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈ ಪೈಕಿ 3.5 ಕೋಟಿ ರೂ. ಕುಲ್ಕುಂದ-ಬಿಸ್ಲೆ ಘಾಟ್ ರಸ್ತೆಯ ದಕ್ಷಿಣ ಕನ್ನಡ ಗಡಿ ತನಕ ಅಭಿವೃದ್ಧಿಗೆ ಮೀಸಲು ಇಡಲಾಗಿದೆ.

ಭೂ-ಕುಸಿತಕ್ಕೆ ನಲುಗಿದ್ದ ರಸ್ತೆ

ಕೆಲವು ವರ್ಷಗಳ ಹಿಂದೆ ಸಂಭವಿಸಿದ್ದ ಭೂ ಕುಸಿತಕ್ಕೆ ಕುಲ್ಕುಂದ-ಬಿಸ್ಲೆ ಘಾಟ್ ರಸ್ತೆಯೂ ತುತ್ತಾಗಿದ್ದು, ಹಾಸನ ಹಾಗೂ ದ.ಕ. ವ್ಯಾಪ್ತಿಯ ರಸ್ತೆಯ ಬಹುತೇಕ ಕಡೆ ಭಾರಿ ಹಾನಿಯಾಗಿ ಸಂಪರ್ಕ ಕಡಿತವಾಗಿತ್ತು.

  • ಸುಬ್ರಹ್ಮಣ್ಯದಿಂದ ಬಿಸ್ಲೆ ತನಕ 4.5 ಕಿ.ಮೀ ಕ್ರಮಿಸುವುದೇ ದುಸ್ತರ
  • ಕುಲ್ಕುಂದ-ಬಿಸ್ಲೆ ಮಾರ್ಗದಲ್ಲಿ ಅಪಘಾತ ಸರ್ವೇ ಸಾಮಾನ್ಯ
  • ಈ ಭಾಗದ ಪ್ರವಾಸಿ ತಾಣಗಳ ಪೈಕಿ ಬಿಸ್ಲೆಘಾಟ್ ಪ್ರಮುಖ
  • ದುರಸ್ತಿ ಕಾರ್ಯ ಈಗಾಗಲೇ ಆರಂಭ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net