ಕಲ್ಲಚಡವು ರಸ್ತೆಯಲ್ಲಿ ಕಲ್ಲುಗಳು ಮಾತ್ರ! : ಮುರಿದು ಬೀಳುವ ಸ್ಥಿತಿಯಲ್ಲಿ ಸೇತುವೆ : ಕ್ಯಾರೇ ಎನ್ನದ ಶಾಸಕಿ ವಿರುದ್ಧ ಆಕ್ರೋಶ

New Project (10)
Published on

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ ಕಡಬ ತಾಲೂಕಿನ ನೆಲ್ಯಾಡಿಯ ಮುಖ್ಯರಸ್ತೆಯಿಂದ ಕಲ್ಲಚಡವು ಪ್ರದೇಶವನ್ನು ಸಂಪರ್ಕಿಸುವ ಸುಮಾರು 2.5 ಕಿ.ಮೀ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಳೆದ 15 ವರ್ಷಗಳಿಂದ ಡಾಂಬರು ಕಾಣದೆ ಹೊಂಡಗುಂಡಿಗಳಿಂದ ತುಂಬಿದೆ. ಶಾಸಕರಿಂದ ಸಚಿವರ ತನಕ ಈ ರಸ್ತೆಯ ದುರವಸ್ಥೆಯನ್ನು ಗಮನಕ್ಕೆ ತಂದರೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದೇ ರಸ್ತೆಯಲ್ಲಿ 40 ವರ್ಷಕ್ಕೂ ಹಳೆಯ ಸೇತುವೆಯೊಂದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಈ ಸೇತುವೆಯ ಮೂಲಕ ಸಂಚರಿಸಿದರೆ ಪ್ರಾಣ ಹಾನಿಯಾಗುವ ಭೀತಿ ಇದ್ದರೂ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಎಚ್ಚೆತ್ತುಕೊಂಡಿಲ್ಲ. ಸ್ಥಳೀಯಾಡಳಿತ ತನ್ನ ಮಿತಿಯಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ನಡೆಸಿಕೊಂಡು ಬಂದರೂ ಶಾಶ್ವತ ಪರಿಹಾರ ಈ ರಸ್ತೆಗೆ ಸಿಗಬೇಕೆನ್ನುವುದು ಸಾರ್ವಜನಿಕರ ಆಗ್ರಹ. ಪ್ರಸ್ತುತ ೀ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಪ್ರತಿ ಬಾರಿ ಮಳೆಗಾಲದಲ್ಲಿ ಕೆಸರುಗದ್ದೆಯಲ್ಲಿ ಸಂಚರಿಸಿದಂತಾಗುತ್ತದೆ. ಹೋರಾಟ ಸಮಿತಿ ರಚನೆ  ಈಗಾಗಲೇ ಹೊಸವೊಕ್ಲು - ಕಲ್ಲಚಡವು ರಸ್ತೆ ಹೋರಾಟ ಸಮಿತಿ ನೆಲ್ಯಾಡಿ ಗ್ರಾಮ ಎಂಬ ಹೆಸರಿನಲ್ಲಿ ಹೋರಾಟ ಸಮಿತಿ ರಚನೆ ಮಾಡಿಕೊಂಡು ತಳಮಟ್ಟದಿಂದ ಮೇಲ್ಮಟ್ಟದ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ಮಾಹಿತಿ ಹಾಗೂ ಮನವಿ ನೀಡಿಕೊಂಡು ಬಂದಿದ್ದಾರೆ. ಹಿಂದೆ ಹೋರಾಟ ಸಮಿತಿಯ ಮೂಲಕ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಸಂದರ್ಭ ಮತದಾನ ಬಹಿಷ್ಕಾರ ನಡೆಸುವ ಹಂತಕ್ಕೆ ಹೋದರೂ ಅಭ್ಯರ್ಥಿಗಳು ಇಲ್ಲಿನ ಜನರ ಮನವೊಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಭರವಸೆಯ ನೀಡಿದ ಮೇಲೆಯೇ ಮತದಾನದ ಬಹಿಷ್ಕಾರವನ್ನು ಹಿಂಪಡೆಯಲಾಗಿತ್ತು. ಆದರೆ ಗೆದ್ದ ನಂತರ ಅಭ್ಯರ್ಥಿಗಳು ಈ ಕಡೆ ತಿರುಗಿಯೂ ನೋಡಿಲ್ಲ. ನಿತ್ಯ ಭಯದಲ್ಲೇ ಸಂಚಾರ ತೀರಾ ಹದಗೆಟ್ಟಿರುವ ಈ ರಸ್ತೆಯ ಹಳೆಯ ಸೇತುವೆ ಯಾವ ಕ್ಷಣದಲ್ಲಾದರೂ ಬೀಳುವ ಸಂಭವವಿದೆ. ಈ ಸೇತುವೆ ಮೇಲೆ ವಾಹನಗಳು ಸಂಚರಿಸಿದಾಗ ಸೇತುವೆಯ ಅಡಿಭಾಗದಲ್ಲಿ ಕಾಂಕ್ರೀಟ್ ತುಂಡುಗಳು ಬೀಳುತ್ತಿದ್ದು ಸೇತುವೆಯ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಪ್ರಶ್ನಿಸುವಂತಿದೆ. ದಿನನಿತ್ಯ ಪಾದಚಾರಿಗಳು, ಕಾರು, ಬೈಕ್, ರಿಕ್ಷಾ ಭಯದಲ್ಲೇ ಸಂಚರಿಸುವಂತಹ ಸ್ಥಿತಿ ಇದೆ. ಸಮಸ್ಯೆಯ ತೀವ್ರತೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಸೂಕ್ತ ಸ್ಪಂದನೆ ಮಾತ್ರ ದೊರೆತಿಲ್ಲ. ಈ ಹಿಂದೆ ಈ ಭಾಗದ ಶಾಸಕರು ಹಾಗೂ ರಾಜ್ಯ ಸಚಿವರು ಆಗಿದ್ದ ಅಂಗಾರ ರಸ್ತೆ ದುರಸ್ತಿ ಹಾಗೂ ಸೇತುವೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ ಅದು ಕೇವಲ ಭರವಸೆಯಾಗಿಯೇ ಉಳಿದಿದೆ.

ರಸ್ತೆ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಶಾಸಕಿ ಭರವಸೆಯಂತೆ ನಡೆದುಕೊಳ್ಳಬೇಕು. ಕ್ಷೇತ್ರದ ಅಭಿವೃದ್ಧಿಯಲ್ಲಿ ತಾರತಮ್ಯ ಸಲ್ಲದು. ಕ್ಷೇತ್ರಕ್ಕೆ ಅನುದಾನ ಇಲ್ಲ ಎಂದು ಪದೇಪದೆ ಹೇಳುತ್ತಿರುವ ಶಾಸಕಿ ರಾಜಕೀಯ ರಹಿತವಾಗಿ, ಇಚ್ಛಾಶಕ್ತಿಯಿಂದ ಶಾಸಕರ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ. ಶಿವಪ್ರಕಾಶ್ ಮಣಿಯಾಣಿ ಕಾರ್ಯದರ್ಶಿ, ಹೊಸವೊಕ್ಲು - ಕಲ್ಲಚಡವು ರಸ್ತೆ ಹೋರಾಟ ಸಮಿತಿ ಸೇತುವೆಯ ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದಿರುವುದರಿಂದ ವಾಹನ ಸವಾರರು , ಪಾದಚಾರಿಗಳು , ಶಾಲಾ ಮಕ್ಕಳು ದಿನನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ನೆಲ್ಯಾಡಿಯಿಂದ ಕಲ್ಲಚಡವು ಮೂಲಕ ಕಡಬ ರಸ್ತೆಯನ್ನು ಸಂಪರ್ಕಿಸುವ ಈ ರಸ್ತೆಯು 15 ವರ್ಷಗಳ ಹಿಂದೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಡಾಂಬರು ಕಂಡಿದ್ದು, ನಂತರ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ವಿನೋದ್ ಕುಮಾರ್ ಬಾಕಿಜಾಲು, ಅಧ್ಯಕ್ಷರು, ಹೊಸವೊಕ್ಲು- ಕಲ್ಲಚಡವು ಹೋರಾಟ ಸಮಿತಿ ಅಂಗವಿಕಲನಾಗಿರುವ ನನಗೆ ಈ ರಸ್ತೆಯಲ್ಲಿ ಸಂಚರಿಸುವಾಗ ಪ್ರಾಣ ಭಯ ಉಂಟಾಗುತ್ತದೆ. ಈ ಹಿಂದೆ ಇದೇ ಅಂಕುಡೊಂಕಾದ ರಸ್ತೆಯಲ್ಲಿ ನನ್ನ ಮಗ ಸೈಕಲ್‌ನಲ್ಲಿ ಸಂಚರಿಸುವಾಗ ಬಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ಇಲ್ಲಿ ಸಂಚರಿಸುವ ನಮ್ಮ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಪ್ರಾಣ ಹಾನಿ ಆಗುವ ಮುನ್ನ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಬಗೆಹರಿಸಿ. ಜೋಮನ್ ಕೆ. ಕುರಿಯಕೊಸ್ ಸರಳೀಕೆರೆ ಸ್ಥಳೀಯರು ಸ್ಥಳೀಯ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆಯ ಬಗ್ಗೆ ಸಂಬಂಧಪಟ್ಟವರ ಮೇಲೆ ಒತ್ತಡ ತರಬೇಕು. ಈಗಾಗಲೇ ಶಾಸಕರು ದುರಸ್ತಿ ಕಾರ್ಯ ಮಾಡಿಕೊಡುವ ಭರವಸೆ ನೀಡಿದ್ದು ತಕ್ಷಣ ಅದನ್ನು ನಡೆಸಿಕೊಡುವಂತೆ ಒತ್ತಾಯಿಸುತ್ತೇನೆ. ಸೇತುವೆ ಬಿದ್ದ ಮೇಲೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುವುದಕ್ಕಿಂತ ತಕ್ಷಣ ಸ್ಥಳಕ್ಕೆ ಬಂದು ಪರಿಹಾರ ಕಾರ್ಯ ಕೈಗೊಳ್ಳಬೇಕು. ರಮೇಶ್ ಶೆಟ್ಟಿ ಬೀದಿ ಮಜಲು ಉಪಾಧ್ಯಕ್ಷರು, ಹೊಸವೊಕ್ಲು- ಕಲ್ಲಚಡವು ಹೋರಾಟ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net