ಹದಗೆಟ್ಟ ಕಡಬ-ಪಂಜ ಮುಖ್ಯರಸ್ತೆ : ಸಂಚಾರ ದುಸ್ತರ : ವಾಹನ ಸವಾರರು, ಪಾದಚಾರಿಗಳಿಗೆ ತಪ್ಪದ ಕಿರಿಕಿರಿ

New Project
Published on

ವಿಜಯವಾಣಿ ಸುದ್ದಿಜಾಲ ಕಡಬ ಕಡಬದಿಂದ ಪಂಜದವರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಸ್ಥಿತಿ ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದ್ದು, ಕಡಬದಿಂದ ಕೋಡಿಂಬಾಳದವರೆಗೆ ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣವಾಗಿರುವ ಕಾರಣ ವಾಹನ ಸಂಚಾರ ದುಸ್ತರವಾಗಿದೆ. ದ್ವಿಚಕ್ರ ವಾಹನ ಸವಾರರು ಪ್ರಾಣದ ಹಂಗು ತೊರೆದು ಸಂಚರಿಸುವ ಪರಿಸ್ಥಿತಿ ಉಂಟಾಗಿದೆ. 4 ತಿಂಗಳ ಹಿಂದೆ ಈ ರಸ್ತೆ ಅಭಿವೃದ್ಧಿಗಾಗಿ ಗುದ್ದಲಿ ಪೂಜೆ ನಡೆದರೂ ಮಳೆಯಿಂದಾಗಿ ವಿಳಂಬವಾಗಿದ್ದು, ಇತ್ತೀಚಿನ ದಿನಗಳಲ್ಲಿ ರಸ್ತೆಯ ಪರಿಸ್ಥಿತಿ ಶೋಚನಿಯವಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಮಂಜೂರುಗೊಂಡಿದ್ದ 1 ಕೋಟಿ ರೂ. ಅನುದಾನದಲ್ಲಿ ಕಡಬ- ಪಂಜ ರಸ್ತೆ ಅಭಿವೃದ್ಧಿಗೊಳಿಸುವ ಸಲುವಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಏ.6ರಂದು ಗುದ್ದಲಿಪೂಜೆ ನೆರವೇರಿಸಿದ್ದರು. ಆದರೆ ಅವಧಿಗೆ ಮೊದಲೇ ಮಳೆ ಆರಂಭವಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲು ತೊಡಕಾಗಿತ್ತು. ಕಡಬದಿಂದ ಪಂಜವನ್ನು ಸಂಪರ್ಕಿಸುವ 10 ಕಿ.ಮೀ. ಉದ್ದದ ರಸ್ತೆಯಲ್ಲಿ ಕಡಬದಿಂದ ಕೋಡಿಂಬಾಳದ ತನಕ ಡಾಂಬರು ಕಿತ್ತುಹೋಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ಗುದ್ದಲಿಪೂಜೆ ನಡೆಯುವ ಮೊದಲು ರಸ್ತೆಗೆ ತೇಪೆ ಹಾಕುವ ಕಾಮಗಾರಿಗೆ ಮುಂದಾದಾಗ ರಸ್ತೆಯನ್ನು ಪೂರ್ತಿ ಅಭಿವೃದ್ಧಿಪಡಿಸುವಂತೆ ಸ್ಥಳೀಯ ವಾಹನ ಚಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿ ತೇಪೆ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅದರಿಂದಾಗಿ ತೇಪೆ ಕಾರ್ಯವೂ ನಡೆದಿರಲಿಲ್ಲ. ಮಳೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ದುಸ್ತರವೆನಿಸಿದಾಗ ಶಾಸಕರ ಸೂಚನೆಯಂತೆ ಲೋಕೋಪಯೋಗಿ ಇಲಾಖೆಯಿಂದ ಜಲ್ಲಿ ಹಾಗೂ ಜಲ್ಲಿ ಹುಡಿ ಮಿಶ್ರಣ ಮಾಡಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಸಿದರೂ ಪ್ರಯೋಜನಕ್ಕೆ ಬಂದಿಲ್ಲ. ಜಲ್ಲಿ ಹುಡಿ ಮಳೆ ನೀರಿನಲ್ಲಿ ತೊಳೆದು ಹೋಗಿ ಗುಂಡಿಗಳಲ್ಲಿ ಜಲ್ಲಿ ಮಾತ್ರ ಉಳಿದ ಕಾರಣ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಕಡಬ- ಪಂಜ ರಸ್ತೆ ಅಭಿವೃದ್ಧಿಗಾಗಿ ಈ ಹಿಂದೆ ಬಿಡುಗಡೆಯಾಗಿರುವ 1 ಕೋಟಿ ರೂ. ಅನುದಾನ ಮಾತ್ರವಲ್ಲದೆ ಮತ್ತೆ 1 ಕೋಟಿ ರೂ. ಅನುದಾನ ಇರಿಸಲಾಗಿದೆ. ಒಟ್ಟು 2 ಕೋಟಿ ರೂ. ಅನುದಾನದಲ್ಲಿ ರಸ್ತೆ ಹೆಚ್ಚು ಹಾಳಾಗಿರುವ ಕಡೆ ಕಾಂಕ್ರೀಟ್ ಹಾಕಿ ಅಭಿವೃದ್ಧಿಪಡಿಸಲಾಗುವುದು. ಉಳಿದೆಡೆ ಡಾಂಬರು ಹಾಕುವುದರೊಂದಿಗೆ ಕಡಬದ ಕಲ್ಲಂತಡ್ಕ ರುದ್ರಭೂಮಿಯ ಬಳಿ ರಸ್ತೆಗೆ ನೀರು ಬರುತ್ತಿರುವುದನ್ನು ತಡೆಯಲು ರಸ್ತೆಯನ್ನು ಕೊಂಚ ಎತ್ತರಿಸುವ ಆಲೋಚನೆಯೂ ಇದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಮಳೆ ಪ್ರಮಾಣ ಕಡಿಮೆಯಾದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಭಾಗೀರಥಿ ಮುರುಳ್ಯ ಶಾಸಕಿ https://www.vijayavani.net/mla-kamath-statement-31 https://www.vijayavani.net/mp-capt-chouta-statement-10

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net