

ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿ.ಸಿ.ರೋಡಿನ ತೋಟಗಾರಿಕೆ ಇಲಾಖೆ ಕಚೇರಿ ಬಳಿಯಿಂದ ಆರಂಭಗೊಂಡು ಕೈಕುಂಜೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯಲ್ಲಿ ಸದ್ಯಕ್ಕೆ ಕಾಂಕ್ರೀಟ್ ಮಾಯವಾಗಿ ಜಲ್ಲಿ ಮಾತ್ರ ಗೋಚರಿಸುತ್ತಿದೆ! ಕಾಂಕ್ರೀಟ್ ರಸ್ತೆಯುದ್ದಕ್ಕೂ ಬೃಹದಾಕಾರದ ಹೊಂಡಗಳು ನಿರ್ಮಾಣವಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಹೌದು... ಡಾಂಬರು ರಸ್ತೆಗಳಲ್ಲಿ ಹೊಂಡ ಗುಂಡಿಗಳು ಸಹಜ. ಆ ಕಾರಣಕ್ಕಾಗಿಯೇ ಸರ್ವಋತು ಉಪಯೋಗವಾಗುವಂತೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಅಚ್ಚರಿಯೆಂದರೆ ಕೈಕುಂಜೆ ಕಾಂಕ್ರೀಟ್ ರಸ್ತೆಯುದ್ದಕ್ಕೂ ಜಲ್ಲಿಗಳು ಚದುರಿ ಹೋಗಿ ಅಲ್ಲಲ್ಲಿ ಬೃಹದಾಕಾರದ ಹೊಂಡಗಳು ನಿರ್ಮಾಣಗೊಂಡು ವಾಹನ ಸಂಚಾರ ಅಪಾಯಕಾರಿಯಾಗಿದೆ. ಈಗಾಗಲೇ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ನಗರ ಕೇಂದ್ರದಲ್ಲಿ ಬರೋಬ್ಬರಿ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಕಳಪೆ ಕಾಮಗಾರಿಯ ಅಸಲಿಯತ್ತು ಕೆಲವೇ ವರ್ಷಗಳಲ್ಲಿ ಅನಾವರಣಗೊಂಡಿದೆ.
ಮಾದರಿ ರಸ್ತೆ ದುರಾವಸ್ಥೆ
ಹಲವು ವರ್ಷಗಳಿಂದ ಡಾಂಬರು ಕಾಣದೆ ಹೊಂಡಗಳಿಂದ ತುಂಬಿ ಹೋಗಿದ್ದ ಬಿ.ಸಿ.ರೋಡ್ ಕೈಕುಂಜೆವರೆಗಿನ ಅರ್ಧ ಕಿ.ಮೀ. ಉದ್ದದ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಹಾಗೂ ಕಾಂಕ್ರೀಟ್ಗೊಳಿಸಲು 2013ರಲ್ಲಿ ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ ಪುರಸಭೆ ಕಾಮಗಾರಿ ಕೈಗೆತ್ತಿಕೊಂಡಿತ್ತು. ಗುತ್ತಿಗೆಯನ್ನು ಕೆಬಿಆರ್ ಇನ್ಫೋಟೆಕ್ ಸಂಸ್ಥೆಗೆ ನೀಡಲಾಗಿತ್ತು. ನಗರದ ಕೇಂದ್ರ ಭಾಗದಿಂದ ಸಂಪರ್ಕ ಪಡೆಯುವ ಈ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ರೂಪಿಸಬೇಕು ಎನ್ನುವ ಉದ್ದೇಶದಿಂದ ರಸ್ತೆಯ ಮಧ್ಯೆ ಡಿವೈಡರ್, ಅದರಲ್ಲಿ ಆಕರ್ಷಕ ಗಿಡಗಳನ್ನು ನೆಟ್ಟು ಸುಂದರಗೊಳಿಸುವ ಯೋಜನೆ ಇತ್ತು. ಆದರೆ ಆ ಬಳಿಕ ಉದ್ದೇಶಿತ ಯೋಜನೆಗಳಾವುದೂ ಈಡೇರಿಲ್ಲ. ಗಿಡಗಳು ಬಿಡಿ ಡಿವೈಡರ್ ನಿರ್ಮಾಣವಾಗಿಲ್ಲ. ಸದ್ಯಕ್ಕಂತೂ ರಸ್ತೆಯಲ್ಲೇ ಗಿಡಗಳನ್ನು ನಾಟಿ ಮಾಡಬಹುದಾದಂತಹ ಹೊಂಡಗಳು ನಿರ್ಮಾಣವಾಗಿವೆ. ಆದರೂ ಈ ಮಾದರಿ ರಸ್ತೆಗೆ 75 ಲಕ್ಷ ರೂ. ಖರ್ಚಾಗಿದೆಯೆಂದರೆ ಅಚ್ಚರಿಯಾಗುತ್ತದೆ.
ನಿರಂತರ ಜನಸಂಚಾರವಿರುವ ರಸ್ತೆ
ಬಿ.ಸಿ.ರೋಡಿನಿಂದ ಕೈಕುಂಜೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿರಂತರ ಜನಸಂಚಾರ ಹಾಗೂ ವಾಹನ ಸಂಚಾರವಿದೆ. ಬಿ.ಸಿ.ರೋಡು ರೈಲು ನಿಲ್ದಾಣ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ, ಹಿರಿಯ ತೋಟಗಾರಿಕಾ ನಿರ್ದೇಶಕರ ಕಚೇರಿ, ಎಪಿಎಂಸಿ ಕಚೇರಿ, ಕನ್ನಡ ಭವನ, ಅಂಗನವಾಡಿ ಕೇಂದ್ರ, ಹಿಂದು ರುದ್ರಭೂಮಿ, ಕೈಕುಂಜೆ ಪೂರ್ವ ಮತ್ತು ಪಶ್ಚಿಮ ಬಡಾವಣೆ, ಆರಾಧ್ಯ ಲೇಔಟ್ ಸೇರಿದಂತೆ ಅನೇಕ ಮನೆ, ವಸತಿ ಸಮುಚ್ಚಯಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಇಂತಹ ಪ್ರಮುಖ ರಸ್ತೆಗೆ ದುಃಸ್ಥಿತಿ ಒದಗಿರುವ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2013ರ ಆಗಸ್ಟ್ 16ರಿಂದ 2014 ಮೇ 31 ಕಾಮಗಾರಿ ಅವಧಿಯಾಗಿತ್ತು. ಆದರೆ ಅವಧಿ ಮುಗಿಯುತ್ತಾ ಬಂದರೂ ಇನ್ನೊಂದು ಬದಿಯ ಕಾಂಕ್ರೀಟ್ ಕಾಮಗಾರಿ, ಚರಂಡಿ ಕಾಮಗಾರಿ ಆರಂಭವಾಗದೆ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ 11 ವರ್ಷಗಳ ಹಿಂದೆಯೇ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಅಂದಿನ ತಹಸೀಲ್ದಾರ್ ಮಲ್ಲೇಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಗುತ್ತಿಗೆ ಸಂಸ್ಥೆಯ ನಿರ್ಲಕ್ಷೃ ಧೋರಣೆ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿತ್ತು. ಮುಂದಿನ ದಿನಗಳಲ್ಲಿ ತಮ್ಮೂರಿಗೆ ಸುಸಜ್ಜಿತ ರಸ್ತೆಯೊಂದು ನಿರ್ಮಾಣಗೊಳ್ಳುತ್ತದೆ ಎಂದು ಕನಸು ಕಂಡಿದ್ದ ನಾಗರಿಕರಿಗೆ ಈಗ ನಿತ್ಯ ನರಕ ಯಾತನೆ.
ಬಿ.ಸಿ.ರೋಡು ಕೈಕುಂಜೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ತೀರ ಹದಗೆಟ್ಟು ಜನರು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಿವಿಧ ಇಲಾಖೆಗಳಿಗೆ, ರೈಲು ನಿಲ್ದಾಣ, ರುದ್ರಭೂಮಿ, ವಸತಿ ಬಡಾವಣೆಗಳಿಗೆ ಹೋಗುವ ಪ್ರಮುಖ ರಸ್ತೆ ಇದಾಗಿದ್ದು, ಮುಂದಿನ ಮಳೆಗಾಲದ ಒಳಗಾಗಿ ಸಂಬಂಧಪಟ್ಟವರು ಹೊಂಡಕ್ಕೆ ಪ್ಯಾಚ್ ಹಾಕಿಸಿ ಡಾಂಬರು ಹಾಕಿದರೆ ಒಳಿತು. ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಮಂದಿ ಸಂಚರಿಸುತ್ತಾರೆ. ಮಳೆಗಾಲದಲ್ಲಿ ಈ ಹೊಂಡಗಳಲ್ಲಿ ನೀರು ತುಂಬಿ ಶಾಲೆಗೆ ಹೋಗುವ ಮಕ್ಕಳಿಗೆ, ದಾರಿಹೋಕರಿಗೆ ಎರಚಿ ತೊಂದರೆಯಾಗುತ್ತದೆ. ಅದಕ್ಕಿಂತ ಮುನ್ನ ಸಂಬಂಧಪಟ್ಟವರು ಸರಿಪಡಿಸಿದರೆ ಉತ್ತಮ. ರಮೇಶ್ ಸಾಲ್ಯಾನ್ ಕೈಕುಂಜೆ, ಸ್ಥಳೀಯರು https://www.vijayavani.net/lorry-scooty-accident https://www.vijayavani.net/harassment