ಬ್ಯಾರಿಕೇಡ್‌ಗಳು ಚರಂಡಿಪಾಲು - ಸುರಕ್ಷತೆಗೆ ಅಳವಡಿಸಿದ ವೇಗತಡೆಗಳನ್ನು ಎಸೆದುಹೋಗುತ್ತಿರುವ ಚಾಲಕರು

PTR_1 JUN_6
Published on


ವಿಟ್ಲ: ವಿವಿಧ ಶಾಲೆಯ ವಿದ್ಯಾರ್ಥಿಗಳು ರಸ್ತೆಯನ್ನು ದಾಟುವ ಕಾರಣದಿಂದ ಓಡಾಡುವ ವಾಹನದ ವೇಗಕ್ಕೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತದೆ. ಆದರೆ ವಾಹನ ಸವಾರರು ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಇವುಗಳನ್ನು ರಸ್ತೆ ಬದಿಯ ಚರಂಡಿಗೆ ಎಸೆದು ಹೋಗುವ ಕಾರ್ಯ ನಡೆಯುತ್ತಿದೆ. ಇದರಿಂದ ಪಾಲಕರು ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ.


ಕಡೂರು-ಕಾಞಂಗಾಡು ಹಾಗೂ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಗಳು ಸಂಽಸುವ ಪಡಿಬಾಗಿಲು ಜಂಕ್ಷನ್‌ನಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಮೂಲಕ ನಡೆಯುವ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪಡಿಬಾಗಿಲು ವಿದ್ಯಾಗಿರಿಯ ಸರ್ಕಾರಿ ಪ್ರಾಥಮಿಕ ಶಾಲೆ, ಪಡಿಬಾಗಿಲು ಅಂಗನವಾಡಿಯ ವಿದ್ಯಾರ್ಥಿಗಳು ಸಾಗಬೇಕಾಗಿದೆ.
ವಿಟ್ಲ-ಅಡ್ಯನಡ್ಕ ಭಾಗದಲ್ಲಿ ಘನ ವಾಹನಗಳ ಓಡಾಟ ಹೆಚ್ಚಾಗಿದ್ದು, ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಾರೆಂಬ ಕಾರಣಕ್ಕೆ ಜಂಕ್ಷನ್‌ನಲ್ಲಿ ವೇಗ ನಿಯಂತ್ರಕವನ್ನು ಅಳವಡಿಸಲಾಗಿತ್ತು. ಈಬ್ಯಾರಿಕೇಡ್‌ಗಳಿಂದ ವಾಹನಗಳಿಗೆ ನಿಗದಿತ ಸಮಯದಲ್ಲಿ ತಲುಪಲಾಗುತ್ತಿಲ್ಲ. ಕೆಲವು ಸಮಯದಲ್ಲಿ ರಸ್ತೆಗಿಟ್ಟ ಕಬ್ಬಿಣದ ಪಟ್ಟಿ ವಾಹನಗಳಿಗೆ ತಾಗಿ ಹಾನಿಯಾಗುತ್ತದೆ. ಕೆಲವು ಭಾಗದಲ್ಲಿ ಲಾರಿಗಳು ಎಳೆದುಕೊಂಡು ಹೋಗುತ್ತವೆ.


ಜಂಕ್ಷನ್‌ನಲ್ಲಿ ಹಾಕಲಾದ ಬ್ಯಾರಿಕೇಡ್‌ಗಳನ್ನು ಸರಿಯಾಗಿ ಇಟ್ಟರೂ, ಅದನ್ನು ಬದಿಗೆ ಎಸೆದು ಹೋಗುವ ಕಾರ್ಯವಾಗುತ್ತಿದೆ. ಹೆದ್ದಾರಿಗಳ ಅಗಲೀಕರಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನಗಳ ಓಟಾಡಕ್ಕೆ ಕಡಿವಾಣ ಹಾಕಲಾಗದ ಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ನಿತ್ಯ ರಸ್ತೆ ದಾಟುವ ಸಾವಿರಾರು ವಿದ್ಯಾರ್ಥಿಗಳ ಪಾಲಕರು ಭಯದಲ್ಲೇ ಇರುವ ಸ್ಥಿತಿ ನಿರ್ಮಾಣವಾಗಿದೆ.


ಸುರಕ್ಷತೆಗಾಗಿ ಕೊಡುಗೆ:
ರಸ್ತೆ ದಾಡುವ ವಿದ್ಯಾರ್ಥಿಗಳಿಗೆ ಅಗತ್ಯ ಸುರಕ್ಷತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸಕ್ರಿಯವಾಗಿದ್ದ ಜೆಸಿಐ ವಿಟ್ಲ ಹಾಗೂ ರೋಟರಿ ಘಟಕಗಳು ಪಡಿಬಾಗಿಲು ಸೇರಿ ಶಾಲೆಗಳಿದ್ದ ಸ್ಥಳಗಳಿಗೆ ಬ್ಯಾರಿಕೇಡ್‌ಗಳನ್ನು ಕೊಡುಗೆಯಾಗಿ ನೀಡಿದೆ. ಆದರೆ ಕೆಲವು ಭಾಗದಲ್ಲಿನ ವ್ಯವಸ್ಥೆ ಸ್ಥಳೀಯರ ನಿರ್ಲಕ್ಷ್ಯದಿಂದ ಗುಜುರಿಯವರ ಪಾಲಾಗಿದೆ. ಕೆಲವು ತುರ್ತು ಸಂದರ್ಭದಲ್ಲಿ ಬೇರೆಡೆಗೆ ಸ್ಥಳಾಂತರ ಮಾಡಿ ಬಳಿಕ ಇಲ್ಲಿಗೆ ಮರಳಿ ಬಂದಿಲ್ಲ.


ಬೇಕಿದೆ ಪರ್ಯಾಯ ವ್ಯವಸ್ಥೆ
ರಸ್ತೆ ಅಗಲೀಕರಣವಾದ ಬಳಿಕ ವಿದ್ಯಾರ್ಥಿಗಳು ರಸ್ತೆ ದಾಟುವುದು ಸಾಹಸಮಯವಾಗಿದೆ. ಕಾನೂನಿನ ಕಾರಣದಿಂದ ಹೆದ್ದಾರಿಗಳಲ್ಲಿ ರಸ್ತೆ ಉಬ್ಬುಗಳನ್ನು ಹಾಕುತ್ತಿಲ್ಲ. ಈ ಕಾರಣಕ್ಕೆ ಪರ್ಯಾಯ ಶಾಶ್ವತ ವ್ಯವಸ್ಥೆಯನ್ನು ಈ ಭಾಗದಲ್ಲಿ ಲೋಕೋಪಯೋಗಿ ಇಲಾಖೆ ಕಲ್ಪಿಸಬೇಕಾಗಿದೆ. ವಿದ್ಯಾರ್ಥಿಗಳ ಸಂಚಾರಕ್ಕೆ ಅಂಡರ್‌ಪಾಸ್ ಅಥವಾ ಮೇಲ್ಸೇತುವೆಯನ್ನು ರಚಿಸಿ ಸುರಕ್ಷತೆಯನ್ನು ಕಲ್ಪಿಸಬೇಕಾಗಿದೆ.


ಮೇಲ್ದರ್ಜೆಗೇರುವ ಕಾರಣ ಅವಕಾಶವಿಲ್ಲ
ಕಡೂರು-ಕಾಞಂಗಾಡು ಅಂತಾರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೆಲ್ದರ್ಜೆಗೇರುವ ಹಂತದಲ್ಲಿದೆ. ಈ ಕಾರಣದಿಂದ ರಸ್ತೆಯಲ್ಲಿ ಹೆಚ್ಚಿನ ಕಾಮಗಾರಿಗಳನ್ನು ನಡೆಸಲು ಅವಕಾಶಗಳನ್ನು ನೀಡುತ್ತಿಲ್ಲ. ಲೊಕೋಪಯೋಗಿ ಇಲಾಖೆಯ ಅಽಕಾರಿಗಳ ಪ್ರಕಾರ ಇರುವ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಾಣಕ್ಕೆ ಅನುದಾನ ಸಿಗುವುದು ಕಷ್ಟವಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಅಥವಾ ಜನಪ್ರತಿನಿಽಗಳು ಕಲ್ಪಿಸಬೇಕಾಗಿದೆ.

ನಿತ್ಯ ಶಾಲೆಗೆ ಹೋಗುವ ಸಮಯದಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ಬಸ್ ಇಳಿದು ರಸ್ತೆ ದಾಟಲು ಕಾಯಬೇಕಾಗುತ್ತದೆ. ಕೆಲವೊಮ್ಮೆ ರಸ್ತೆ ದಾಟಲಾಗದೆ ಇನ್ನೊಂದು ಬಸ್ ಹಿಡಿಯಲಾಗದೆ ಕಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ನೇರ ರಸ್ತೆಯಾದ ಕಾರಣದಿಂದ ವಾಹನಗಳ ವೇಗ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವ ಕೆಲಸವಾಗಬೇಕು.
| ಅವಿನಾಶ್
ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net