ರಸ್ತೆಯ ಎರಡೂ ಬದಿ ತಡೆಗೋಡೆ - ಸೇತುವೆ ಕೆಲಸ ಅಪೂರ್ಣ, ಸುಗಮ ಸಂಚಾರಕ್ಕೆ ತೊಡಕು

PTR_24 MAY_5
Published on

ಅರ್ಧಕ್ಕೆ ನಿಂತ ರಸ್ತೆ ಹಾಗೂ ಸೇತುವೆ ಕೆಲಸ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಬೇಕಾದ ಅಽಕಾರಿಗಳು ಕುಸಿದ ಜಾಗಕ್ಕೆ ತಡೆ ನಿರ್ಮಾಣ ಮಾಡುವ ಬದಲು ರಸ್ತೆಯ ಎರಡೂ ಬದಿ ತಡೆಗೋಡೆ ನಿರ್ಮಿಸುವ ಮೂಲಕ ಅಡ್ಡದಾರಿ ಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ.

ಪುತ್ತೂರು ಪೇಟೆಯಿಂದ ಉಪ್ಪಿನಂಗಡಿ ರಸ್ತೆ ಸಂಪರ್ಕಿಸುವ ನೆಲ್ಲಿಕಟ್ಟೆ-ಕಬಕ-ಪುತ್ತೂರು ರೈಲ್ವೆ ನಿಲ್ದಾಣ-ಹಾರಾಡಿ ರಸ್ತೆಯಲ್ಲಿ ೫೦ ವರ್ಷ ಹಳೆಯ ಸೇತುವೆಯನ್ನು ಹೊಸದಾಗಿ ನಿರ್ಮಾಣ ಮಾಡದೆ ಅಲ್ಲಿ ರಸ್ತೆಯ ಕೆಲಸ ಅರ್ಧಕ್ಕೆ ಬಿಡಲಾಗಿದೆ. ಇದರಿಂದ ಹಲವು ವಾಹನಗಳು ಈ ಜಾಗದಲ್ಲಿ ಅಪಘಾತಕ್ಕೊಳಗಾಗಿವೆ.


ರಸ್ತೆ ನಿರ್ಮಾಣವಾಗಿ ವರ್ಷವಾಗುತ್ತ ಬಂದರೂ ಸೂಕ್ತ ವ್ಯವಸ್ಥೆಯಿಲ್ಲದೆ, ಅಽಕಾರಿಗಳು ದಾಖಲೆಗಾಗಿ ಮಾತ್ರ ಕೆಲಸ ನಿರ್ವಹಿಸುವುದು ಎಂದು ವಿಜಯವಾಣಿಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ನಗರಸಭೆಯಲ್ಲಿ ಸಂಚಲನ ಪ್ರಾರಂಭವಾಗಿದೆ. ಶುಕ್ರವಾರ ಬೆಳಗ್ಗೆ ಜಿಲ್ಲಾಽಕಾರಿಗಳೂ ವರದಿಗೆ ಸ್ಪಂದಿಸಿ ಸೂಕ್ತ ರೀತಿಯಲ್ಲಿ ಇಲ್ಲಿ ಕೆಲಸ ನಿಭಾಯಿಸಲು ಪುತ್ತೂರು ಸಹಾಯಕ ಆಯುಕ್ತರಿಗೆ ಸೂಚಿಸಿರುವುದಾಗಿ ಹೇಳಿದ್ದರು. ಮಧ್ಯಾಹ್ನದ ಹೊತ್ತಿಗೆ ಕೆಂಪು ಕಲ್ಲು ತಂದು ತಡೆಗೋಡೆ ಕಟ್ಟುವ ಕೆಲಸ ಪ್ರಾರಂಭ ಮಾಡಲಾಗಿದೆ.

ರಸ್ತೆಯ ಎರಡೂ ಕಡೆ ಗಿಡಗಳನ್ನು ತೆರವು ಮಾಡುವ ಕಾರ್ಯ ಆಗಬೇಕಾಗಿದೆ. ಕಿರಿದಾದ ರಸ್ತೆಯಲ್ಲಿ ಅಪಾಯ ತಡೆಯಲು ತಡೆಗೋಡೆ ಸಾಕಾ? ವೇಗದಲ್ಲಿ ಬರುವ ವಾಹನಗಳ ಅಬ್ಬರಕ್ಕೆ ಇದು ಉಳಿಯಬಹುದಾ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿದೆ.


ಚರಂಡಿಗಿಳಿದ ಜೆಸಿಬಿ
ಮಳೆಗಾಲದ ಪೂರ್ವಭಾವಿ ಕೆಲಸದಲ್ಲಿ ಹೆಸರಿನಲ್ಲಿ ನಗರದ ಎಲ್ಲ ಚರಂಡಿಗಳನ್ನು ಸ್ವಚ್ಛ ಮಾಡಿರುವುದಾಗಿ ನಗರಸಭೆ ಹೇಳಿಕೊಂಡಿತ್ತು. ಆದರೆ ಹಾರಾಡಿ ಸಮೀಪದ ಮಾರುತಿ ಶೋರೂಂ ಮುಂಭಾಗದ ಕಾಲುವೆಯಲ್ಲಿ ರೆಂಬೆ, ಸೊಪ್ಪು ರಾಶಿ ಬಿದ್ದಿರುವುದನ್ನು ವರದಿಯಲ್ಲಿ ಪ್ರಕಟಿಸಲಾಗಿತ್ತು. ಶುಕ್ರವಾರ ಚರಂಡಿಗೆ ಇಳಿದ ಜೆಸಿಬಿ ರಾಶಿ ಬಿದ್ದ ಕಸವನ್ನು ತೆಗೆದು ದಂಡೆಗೆ ಹಾಕಿರುವ ಬಗ್ಗೆ ನಗರಸಭೆಯ ಅಽಕಾರಿಗಳು ಮಾಹಿತಿ ನೀಡಿದ್ದಾರೆ.


ಎರಡೆರಡು ಬಿಲ್?
ಚರಂಡಿ ಸ್ವಚ್ಛ ಮಾಡಿದ ಕಸವನ್ನು ಅಲ್ಲೇ ಬಿಟ್ಟು ಹೋಗಲಾಗುತ್ತಿದೆ. ಮಳೆ ಜೋರಾಗಿ ಬರುತ್ತಿದ್ದಂತೆ ದಂಡೆಯಲ್ಲಿರುವ ಕಸದ ರಾಶಿ ಮತ್ತೆ ಚರಂಡಿಗೆ ಬಿದ್ದು ನೀರು ಸಮರ್ಪಕವಾಗಿ ಹರಿದು ಹೋಗುವುದಕ್ಕೆ ತಡೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅಽಕಾರಿಗಳು ಮಾತ್ರ ಹೊಸ ತಂತ್ರಜ್ಞಾನಗಳ ಹೆಸರಿನಲ್ಲಿ ಎರಡೆರಡು ಬಿಲ್ ಮಾಡುವ ಕೆಲಸವನ್ನೇ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.


ನೋಟಿಸ್ ಜಾರಿ
ರಾಜಕಾಲುವೆ ದುರಸ್ತಿ ಹಾಗೂ ರಸ್ತೆ ಕೆಲಸ ಅಪೂರ್ಣವಾಗಿದ್ದು, ತಡೆಗೋಡೆ ಕುಸಿತವಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಕೂಡಲೇ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಪುತ್ತೂರು ತಹಸೀಲ್ದಾರ್ ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ಅಭಿಯಂತ ಮತ್ತು ನಗರಸಭೆಯ ಪೌರಾಯುಕ್ತರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net