ಪೈಪ್ ಅಳವಡಿಕೆಗೆ ರಸ್ತೆ ಅಗೆತ! : ದುರಸ್ತಿಗಿಲ್ಲ ಕ್ರಮ : ನಪಂ ಸಭೆಯಲ್ಲಿ ಗದ್ದಲ : ಉಪ ಸಮಿತಿ ರಚನೆ

New Project (37)
Published on

ವಿಜಯವಾಣಿ ಸುದ್ದಿಜಾಲ ಸುಳ್ಯ

ನಗರದಲ್ಲಿ ಅನುಷ್ಠಾನ ಆಗುತ್ತಿರುವ ಅಮೃತ್-2 ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಅಳವಡಿಕೆಗಾಗಿ ಅಗೆದ ರಸ್ತೆ ಹಾಗೂ ರಸ್ತೆಬದಿ ದುರಸ್ತಿ ಮಾಡದೆ ಇರುವುದರಿಂದ ನಗರದಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿರುವ ಬಗ್ಗೆ ನಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಕಡಿದು ಹಾಕಿದ ರಸ್ತೆಯನ್ನು ಸರಿಪಡಿಸಲು ಆಗದಿದ್ದರೆ ಸಾಧ್ಯವಿಲ್ಲ ಎಂದು ಆಡಳಿತ ಪಕ್ಷದವರು ಸಾರ್ವಜನಿಕವಾಗಿ ಹೇಳಿಕೆ ನೀಡಲಿ ಎಂದು ವಿಪಕ್ಷ ಸದಸ್ಯರು ಸವಾಲು ಹಾಕಿದರು.

ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಸ್ತೆ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಎಸ್.ಉಮ್ಮರ್, ಕಾಮಗಾರಿಗಾಗಿ ಹಲವು ತಿಂಗಳ ಹಿಂದೆ ಅಗೆದ ರಸ್ತೆ ಸರಿಪಡಿಸದೆ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ ತಿಂಗಳ ಕೊನೆಯ ವೇಳೆಗೆ ಕಡಿದು ಹಾಕಿದ ಎಲ್ಲ ರಸ್ತೆಯನ್ನು ಸರಿಪಡಿಸುವುದಾಗಿ ಹೇಳಿದ್ದರೂ ಆಗಿಲ್ಲ. ಶಾಸಕರು ಸಭೆ ನಡೆಸಿ 15 ದಿನದಲ್ಲಿ ಸರಿಪಡಿಸಲು ಸೂಚನೆ ನೀಡಿ ಒಂದು ತಿಂಗಳು ಕಳೆದರೂ ಮಾಡಿಲ್ಲ. ಇದು ಯಾಕೆ ಹೀಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ನಗರದಲ್ಲಿ ಅನುಷ್ಠಾನವಾಗುತ್ತಿರುವ ಅತೀ ದೊಡ್ಡ ಯೋಜನೆ ಇದು, ಅಗೆದ ರಸ್ತೆ ಬದಿ, ಸರಿಪಡಿಸಲು ಸಾಕಷ್ಟು ಒತ್ತಡ ತಂದರೂ ಸರಿಪಡಿಸಿಲ್ಲ ಎಂದು ಹೇಳಿದರು. ಕಾಮಗಾರಿ ನಡೆಸಿ ನಿರ್ವಹಣೆ ಸರಿಯಾಗಿ ಮಾಡದ ಬಗ್ಗೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ದೂರು ನೀಡಬೇಕು ಎಂದು ಸದಸ್ಯ ವಿನಯ ಕುಮಾರ್ ಕಂದಡ್ಕ ಹೇಳಿದರು. ನಪಂ ಅಧ್ಯಕ್ಷೆ ಶಶಿಕಲಾ, ಸದಸ್ಯ ವಿನಯ ಕುಮಾರ್ ಕಂದಡ್ಕ ಹಾಗೂ ವಿಪಕ್ಷ ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ ಮಧ್ಯೆ ವಾಗ್ವಾದ ನಡೆಯಿತು. ಸಭೆಯ ಹಲವು ಹೊತ್ತು ಈ ವಿಷಯದ ಬಗ್ಗೆ ಚರ್ಚೆ ನಡೆಯಿತು. ಆಡಳಿತ ವಿಪಕ್ಷ ಸದಸ್ಯರ ಮಧ್ಯೆ ತೀವ್ರ ವಾಗ್ವಾದಕ್ಕೂ ವೇದಿಕೆಯಾಯಿತು.

ನಗರ ಪಂಚಾಯಿತಿ ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಹಾಗು ನಗರ ಪಂಚಾಯಿತಿ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಸ್ವಾಗತಿಸಿದರು.

15 ದಿನಗಳಲ್ಲಿ ದುರಸ್ತಿ ಭರವಸೆ

ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ನೀರಿನ ಯೋಜನೆ ಟಕಗಳ ನಿರ್ಮಾಣ ಆಗಿರುವ ಸಂದರ್ಭ ಸಮಸ್ಯೆ ಆಗಿದೆ. ಈ ಕುರಿತು ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿಯೂ ಚರ್ಚೆ ಆಗಿದೆ. ಅಗೆದ ರಸ್ತೆಯನ್ನು 15 ದಿನಗಳಲ್ಲಿ ಸರಿಪಡಿಸಿ ನಿರ್ವಹಣೆ ಮಾಡುವುದಾಗಿ ಇಂಜಿನಿಯರ್‌ಗಳು ತಿಳಿಸಿದ್ದಾರೆ ಎಂದು ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಹೇಳಿದರು. ಕೆ.ಎಸ್.ಉಮ್ಮರ್ ಪ್ರತಿಕ್ರಿಯಿಸಿ ಇಷ್ಟು ಸಮಸ್ಯೆ ಇದ್ದರೂ ಯಾಕೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ಬರೆದಿಲ್ಲ ಎಂದು ಪ್ರಶ್ನಿಸಿದರು. ಮುಂದಿನ 15 ದಿನಗಳೊಳಗೆ ಅಂದರೆ ಜುಲೈ 15ರೊಳಗೆ ರಸ್ತೆ ದುರಸ್ತಿ ಮಾಡದಿದ್ದರೆ ನ.ಪಂ. ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದರು.

ಮತ್ತೆ ಶೆಡ್‌ನಲ್ಲಿ ಕಸ ತುಂಬಿರುವುದೇಕೆ?

ಸುಳ್ಯದ ಕಸ ವಿಷಯದ ಬಗ್ಗೆ ಭಾರೀ ಚರ್ಚೆ ನಡೆಯಿತು. ಸುಳ್ಯ ನಗರದ ಕಸ ವಿಲೇವಾರಿ ಮಾಡುವ ಕಲ್ಚರ್ಪೆಯಲ್ಲಿ ಗ್ಯಾಸಿಫಿಕೇಷನ್ ಯಂತ್ರದ ಮೂಲಕ ಕಸ ವಿಲೇವಾರಿ ಮಾಡುವುದು ಸ್ಥಗಿತಗೊಂಡಿರುವ ಬಗ್ಗೆ ಚರ್ಚೆ ನಡೆಯಿತು. ನಪಂ ಮುಂಭಾಗದ ಶೆಡ್‌ನಲ್ಲಿ ಕಸ ಮತ್ತೆ ತುಂಬಿರುವುದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಗ್ಯಾಸಿಫಿಕೇಷನ್ ಯಂತ್ರ ಚಾಲೂ ಮಾಡುವ ಕಂಪನಿಗೆ 10 ತಿಂಗಳಿನಿಂದ ಹಣ ಪಾವತಿ ಮಾಡಿಲ್ಲದ ಕಾರಣ ಅದು ಸ್ಥಗಿತಗೊಂಡಿದೆ ಎಂದು ಸದಸ್ಯ ವಿನಯ ಕುಮಾರ್ ಕಂದಡ್ಕ ಹೇಳಿದರು. ಪ್ರತಿ ತಿಂಗಳು ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮೊತ್ತ ಖರ್ಚು ಮಾಡಿದರೂ ಮತ್ತೆ ಶೆಡ್‌ನಲ್ಲಿ ಕಸ ತುಂಬಿರುವುದು ಯಾಕೆ ಎಂದು ಕೆ.ಎಸ್.ಉಮ್ಮರ್ ಪ್ರಶ್ನಿಸಿದರು.

ನಿರ್ವಹಣೆ ಮಾಡುವವರಿಗೆ ಗುತ್ತಿಗೆ

ಹೊಸ ಷರತ್ತಿನ ಪ್ರಕಾರ ಟೆಂಡರ್ ಮಾಡಿ ಸಂಪೂರ್ಣ ಕಸ ವಿಲೇವಾರಿ ಮತ್ತು ನಿರ್ವಹಣೆ ಮಾಡುವವರಿಗೆ ಗುತ್ತಿಗೆ ನೀಡಿ ಎಂದು ಕೆ.ಎಸ್.ಉಮ್ಮರ್ ಒತ್ತಾಯಿಸಿದರು. ಕಲ್ಚರ್ಪೆಯಲ್ಲಿ ತುಂಬಿರುವ ಕಸ ಖಾಲಿ ಮಾಡುವುದರ ಜತೆಗೆ ದಿನ ನಿತ್ಯದ ಕಸ ವಿಲೇವಾರಿ ಮಾಡುವ ನೆಲೆಯಲ್ಲಿ ಷರತ್ತು ಮಾಡಿ ಟೆಂಡರ್ ಮಾಡಬೇಕು ಎಂದರು. ಈ ಹಿನ್ನೆಲೆಯಲ್ಲಿ ಸೂಕ್ತ ಬದಲಾವಣೆಯೊಂದಿಗೆ ಕಸ ವಿಲೇವಾರಿ ಮತ್ತು ನಿರ್ವಹಣೆ ಮಾಡುವ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲು ನಗರ ಪಂಚಾಯಿತಿ ಸದಸ್ಯರ ಉಪ ಸಮಿತಿ ರಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net