ಹರಿಪ್ರಸಾದ್ ನಂದಳಿಕೆ ಕಾರ್ಕಳ
ನಿತ್ಯವೂ ಟನ್‌ಗಟ್ಟಲೆ ಲೋಡು ತುಂಬಿದ ಟಿಪ್ಪರ್‌ಗಳ ಆರ್ಭಟಕ್ಕೆ ವರ್ಷದ ಹಿಂದಷ್ಟೇ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯೊಂದು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಪರಿಣಾಮ ಹೊಂಡಗಳು ನಿರ್ಮಾಣಗೊಂಡಿವೆ.
ನಂದಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರ್ಡ್ ಶಾಲೆಯಿಂದ ಸಂಪರ್ಕ ಪಡೆದು ಗೋಳಿಕಟ್ಟೆ ಕೊಪ್ಪಳ ಮಾರ್ಗವಾಗಿ ಪಡುಬೆಟ್ಟು ಭಾಗ ಸಂಪರ್ಕ ಪಡೆಯುವ ರಸ್ತೆಯಲ್ಲಿ ನಿತ್ಯವೂ ನೂರಾರು ಲೋಡ್ ತುಂಬಿದ ಟಿಪ್ಪರ್‌ಗಳು ಓಡಾಡುತ್ತಿದ್ದು, ಪ್ರಮುಖ ಕಡೆಗಳಲ್ಲಿ ಹೊಂಡ ಆಗಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಭಾರಿ ವಾಹನಗಳ ಆರ್ಭಟ: ನಂದಳಿಕೆ ಹಾಗೂ ಸೂಡ ಗ್ರಾಮದಲ್ಲಿ ನೂರಾರು ಕ್ರಷರ್, ಕಪ್ಪು ಕಲ್ಲಿನ ಕ್ವಾರಿಗಳು ಮತ್ತು ಡಾಂಬರ್ ಪ್ಲಾೃಂಟ್‌ನಿಂದ ಬರುವ ನೂರಾರು ವಾಹನಗಳು ಗೋಳಿಕಟ್ಟೆ ಮಾರ್ಗವಾಗಿ ಸಂಚರಿಸುತ್ತಿದ್ದು, ಭಾರಿ ವಾಹನಗಳ ಓಡಾಟದಿಂದ ಈ ರಸ್ತೆಗೆ ದುಸ್ಥಿತಿ ಎದುರಾಗಿದೆ. ಹದಗೆಟ್ಟ ರಸ್ತೆ ದುರಸ್ತಿಗೊಳಿಸುವಲ್ಲಿ ಗುತ್ತಿಗೆದಾರರು, ಆಡಳಿತ ವಿಭಾಗ ನಿರ್ಲಕ್ಷೃ ವಹಿಸುತ್ತಿದ್ದು, ಜನಸಾಮಾನ್ಯರ ಮನವಿಗಳನ್ನು ಈಗಾಗಲೇ ಅನೇಕ ಬಾರಿ ತಿರಸ್ಕರಿಸಿದೆ.
ಕಳಪೆ ಕಾಮಗಾರಿಯೇ ಕಾರಣ
ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ಕೆಲವೇ ದಿನಗಳಲ್ಲಿ ರಸ್ತೆ ಕುಸಿದು ಬೃಹತ್ ಹೊಂಡ ನಿರ್ಮಾಣವಾಗಿದ್ದು, ಬಳಿಕ ಗುತ್ತಿಗೆದಾರ ತೇಪೆ ಹಾಕಿ ಹೊಂಡ ಮುಚ್ಚಿದ್ದರು. ನಿರಂತರ ಭಾರಿ ವಾಹನಗಳ ಓಡಾಟ ಹಾಗೂ ಅಸಮರ್ಪಕ ನಿರ್ವಹಣೆ ಕಾರಣದಿಂದ ಕಾಮಗಾರಿಯ ಗುಣಮಟ್ಟ ಕುರಿತು ಸಾಬೀತಾಗಿದೆ. ರಸ್ತೆ ಮತ್ತಷ್ಟು ಕುಸಿಯುವ ಭೀತಿ ಇದ್ದು, ಆದರೆ ಗುತ್ತಿಗೆದಾರರು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತಿದ್ದಾರೆ. ರಸ್ತೆ ಕುಸಿದು ಸಾರ್ವಜನಿಕ ಆಸ್ತಿ, ಜೀವಹಾನಿ ಸಂಭವಿಸುವ ಮೊದಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆಯು ನಿರ್ಮಾಣವಾಗಿ ಒಂದು ವರ್ಷ ಕಳೆಯುವ ಮುನ್ನವೇ ತೀರ ಹದಗೆಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕಾಂಕ್ರೀಟ್ ರಸ್ತೆಯೂ ಅಲ್ಲಲ್ಲಿ ಬಿರುಕು ಬಿಟ್ಟು ಹೊಂಡಗುಂಡಿಗಳು ನಿರ್ಮಾಣವಾಗಿವೆ. ಹದಗೆಟ್ಟ ರಸ್ತೆ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ.
– ಸಂಪತ್, ವಾಹನ ಸವಾರ
ಭಾರಿ ವಾಹನದ ಓಡಾಟ ಹಾಗೂ ಕಳಪೆ ಕಾಮಗಾರಿಯಿಂದ ರಸ್ತೆಯೂ ಹದಗೆಟ್ಟಿದ್ದು, ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿ ಸಣ್ಣಪುಟ್ಟ ವಾಹನಗಳು ಓಡಾಡುವುದಕ್ಕೂ ಕಷ್ಟಕರವಾಗಿದೆ. ಜೀವ ಹಾಗೂ ಸಾರ್ವಜನಿಕ ಆಸ್ತಿ ಹಾನಿಯಾದ ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬಹುದೇನೋ.
– ಸಂತೋಷ್, ಗ್ರಾಮಸ್ಥ