ಆರ್​​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್​​ಗೆ ಜಾಮೀನು

lalu
Published on

ರಾಂಚಿ : ಮೇವು ಹಗರಣಕ್ಕೆ ಸಂಬಂಧಿಸಿದ ಡುಮ್ಕಾ ಟ್ರೆಷರಿ ಕೇಸ್​​ನಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ(ಆರ್​ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಇಂದು ಜಾಮೀನು ನೀಡಿದೆ. ಮೂರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲೂ ಅವರಿಗೆ ಇದೀಗ ಮನೆಗೆ ತೆರಳುವ ಅವಕಾಶ ಲಭ್ಯವಾಗಿದೆ.

'ಡುಮ್ಕಾ ಖಜಾನೆ ಪ್ರಕರಣ' ಎಂದೇ ಕರೆಯಲ್ಪಡುವ ಈ ಪ್ರಕರಣದಲ್ಲಿ, ಲಾಲು ಅವರು 1990ರ ದಶಕದಲ್ಲಿ ಮುಂಚಿನ ಬಿಹಾರದಲ್ಲಿದ್ದ ಜಾರ್ಖಂಡ್​ ನಗರದ ಖಜಾನೆಯಿಂದ 3.13 ಕೋಟಿ ರೂ. ಹಣವನ್ನು ಅಕ್ರಮವಾಗಿ ಹೊರತೆಗೆದ ಆರೋಪ ಎದುರಿಸುತ್ತಿದ್ದಾರೆ. ಡಿಸೆಂಬರ್ 2017 ರಿಂದ ಜೈಲಿನಲ್ಲಿರುವ 72 ವರ್ಷ ವಯಸ್ಸಿನ ಲಾಲು, ಬಂಧನದ ಅಧಿಕ ಸಮಯವನ್ನು ಝಾರ್ಕಂಡಿನ ರಾಜೇಂದ್ರ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​ ಆಸ್ಪತ್ರೆಯಲ್ಲೇ ಕಳೆದಿದ್ದಾರೆ. ಈ ಜನವರಿ ತಿಂಗಳಲ್ಲಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್​​ಗೆ ಕರೆತರಲಾಗಿತ್ತು.

ಹಾಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲುಗೆ ಮೇವು ಹಗರಣಕ್ಕೆ ಸಂಬಂಧಿಸಿದ ಇನ್ನೂ ಮೂರು ಪ್ರಕರಣಗಳಲ್ಲಿ ಅದಾಗಲೇ ಜಾಮೀನು ಲಭಿಸಿತ್ತು. ಇದೀಗ ಡುಮ್ಕಾ ಪ್ರಕರಣದಲ್ಲಿಯೂ ಜಾಮೀನು ಲಭ್ಯವಾಗಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಲಾಲು ತಮ್ಮ ಮನೆಗೆ ತೆರಳಬಹುದಾಗಿದೆ.

ಜಾಮೀನು ನೀಡಿದ ಝಾರ್ಕಂಡ್​ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರು, ಪೂರ್ವಾನುಮತಿ ಇಲ್ಲದೆ ದೇಶವನ್ನು ಬಿಟ್ಟು ಹೋಗಬಾರದು ಹಾಗೂ ತಮ್ಮ ವಿಳಾಸ ಅಥವಾ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಬದಲಾಯಿಸಬಾರದು ಎಂಬ ಷರತ್ತುಗಳನ್ನು ವಿಧಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net