ನದಿಗಳ ಮಟ್ಟ ಏರಿಕೆ, ಪ್ರಕ್ಷುಬ್ಧಗೊಂಡ ಕಡಲು

gan
Published on

ಕುಂದಾಪುರ: ತಾಲೂಕಿನಾದ್ಯಂತ ಬುಧವಾರ ಸಂಜೆಯಿಂದ ಸುರಿಯುತ್ತಿದ್ದ ಮಳೆ ಶುಕ್ರವಾರ ಕೊಂಚ ಬಿಡುವು ನೀಡಿದ್ದು, ಸಂಜೆ ಬಳಿಕ ಮತ್ತೆ ಬಿರುಸುಗೊಂಡಿದೆ.

ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಇಳಿಮುಖವಾಗಿದೆ. ಪಂಚಗಂಗಾವಳಿ ನದಿಯಲ್ಲಿ ನೀರಿನ ಪ್ರವಾಣ ಹೆಚ್ಚಾಗುತ್ತಿದ್ದು, ಕಡಲು ಮತ್ತಷ್ಟು ಪ್ರಕ್ಷುಬ್ಧಗೊಂಡಿದೆ. ಸಮುದ್ರದ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಹೊಸಾಡು, ಮರವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲ ತೀರದಲ್ಲಿ ಕಡಲ್ಕೊರೆತ ತೀವ್ರವಾಗುತ್ತಿದೆ. ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿದೆ. ಗಾಳಿ ಮಳೆಯಿಂದ ತಾಲೂಕಿನ ಹಲವು ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ.

ಗಂಗೊಳ್ಳಿಯ ಮುಖ್ಯ ರಸ್ತೆ ಹೊಳೆಯಂತಾಗಿತ್ತು. ಇದರಿಂದ ಇಲ್ಲಿನ ಪದವಿಪೂರ್ವ ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿಗಳು ವಾಪಸ್ ಬರುವಾಗ ನೀರು ನಿಂತ ರಸ್ತೆಯಲ್ಲೇ ಪ್ರಯಾಸದಿಂದ ತೆರಳುವಂತಾಯಿತು. ವಾಹನ ಸವಾರರು ಹಾಗೂ ಪಾದಚಾರಿಗಳೂ ಸಮಸ್ಯೆ ಅನುಭವಿಸಿದೆ. ಚರಂಡಿ ಅವ್ಯವಸ್ಥೆ ಸರಿಪಡಿಸದ ಗಂಗೊಳ್ಳಿ ಗ್ರಾ.ಪಂ. ವಿರುದ್ಧ ಸಾರ್ವಜನಿಕರು ಅಸವಾಧಾನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಇಲಾಖೆ ಸಮಸ್ಯೆ ಬಗ್ಗೆ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಹಕ್ಲಾಡಿ ಗ್ರಾಮ ಹೊಳ್ಮಗೆ ಎಂಬಲ್ಲಿ ವೆಂಕಮ್ಮ ಎಂಬುವರ ಮನೆಯ ಅಡುಗೆ ಮನೆಯ ಗೋಡೆ, ನೂಜಾಡಿ ಗ್ರಾಮದ ಪಾರ್ವತಿ ಶೆಡ್ತಿ ಎಂಬುವರ ಮನೆಯ ಗೋಡೆ ಕುಸಿದಿದೆ. ವಡೇರ ಹೋಬಳಿ ಗ್ರಾಮದ ಭಗತ್ ಸಿಂಗ್ ರಸ್ತೆಯ ವಸಂತಿ ಎಂಬುವರ ಮನೆಯ ಮೇಲೆ ಆಲದ ಮರ ಬಿದ್ದಿದೆ. ತಲ್ಲೂರು ಗ್ರಾಮದ ಚಂದು ದೇವಾಡಿಗ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net