

Rishabh Pant: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಭಾರತ ಸೋತಿದೆ. ಇನ್ನು ಜುಲೈ 2ರಿಂದ ನಡೆಯಲಿರುವ ಎರಡನೇ ಪಂದ್ಯವನ್ನು ಭಾರತ ಗೆದ್ದು ಬೀಗುವ ವಿಶ್ವಾಸದಲ್ಲಿದೆ. ಈ ಸರಣಿಯ ಮೊದಲ ಟೆಸ್ಟ್ನಲ್ಲಿ ಎರಡು ಭರ್ಜರಿ ಶತಕ ದಾಖಲಿಸಿರುವ ಟೀಮ್ ಇಂಡಿಯಾ ಉಪನಾಯಕ ರಿಷಭ್ ಪಂತ್, ಸೆಂಚುರಿ ಬಾರಿಸುತ್ತಿದ್ದಂತೆ ಸಮರ್ಸಾಲ್ಟ್ ( ಪಲ್ಟಿ) ಹೊಡೆಯುವ ಮೂಲಕ ವಿಶೇಷವಾಗಿ ಮೈದಾನದಲ್ಲಿ ಸಂಭ್ರಮಿಸಿದ್ದರು. ಇದು ಅವರ ಅಭಿಮಾನಿ ಬಳಗಕ್ಕೂ ಭಾರೀ ಖುಷಿ ತಂದಿತು. ಆದರೆ, ಈ ಕುರಿತು ಅಂದು 2022ರ ಕಾರು ಅಪಘಾತದಲ್ಲಿ ಪಂತ್ ಪ್ರಾಣ ಉಳಿಸಿದ ವೈದ್ಯರು ಅಚ್ಚರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
2022ರ ಡಿಸೆಂಬರ್ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಕಾರಿನ ಸ್ಥಿತಿಗತಿ ನೋಡಿದಾಗ ರಿಷಭ್, ಬದುಕುಳಿಯುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗಿತ್ತು. ಆದರೆ, ಅವರನ್ನು ಪವಾಡದಂತೆ ಉಳಿಸಿದ ಹೆಸರಾಂತ ವೈದ್ಯ ಡಾ. ದಿನ್ಶಾ ಪಾರ್ಡಿವಾಲಾ. ಕಾರು ಅಪಘಾತದ ಬಳಿಕ ಪಂತ್ ತಮ್ಮನ್ನು ಕೇಳಿದ ಮೊದಲ ಪ್ರಶ್ನೆಯನ್ನು ವೈದ್ಯರು ಇಲ್ಲಿ ಹಂಚಿಕೊಂಡಿದ್ದಾರೆ. 'ನನ್ನಿಂದ ಮತ್ತೇ ಕ್ರಿಕೆಟ್ ಆಡಲು ಸಾಧ್ಯವೇ' ಎಂದು ಕೇಳಿದ್ದರು. ಈ ದುರಂತದಲ್ಲಿ ರಿಷಭ್ ಪಂತ್ ಬದುಕಿದ್ದೇ ಪವಾಡ. ಈ ವಿಷಯದಲ್ಲಿ ಅವರು ಬಹಳ ಲಕ್ಕಿ ಎಂದೇ ಹೇಳಬಹುದು" ಎಂದರು.
"ನಮ್ಮ ಆಸ್ಪತ್ರೆಗೆ ದಾಖಲಾದ ಪಂತ್ಗೆ ಬಲ ಮೊಣಕಾಲಿನ ಮೂಳೆ ಜಾರಿತ್ತು. ಅವರ ಬಲ ಪಾದದ ಮೇಲೂ ಗಂಭೀರ ಗಾಯವಾಗಿತ್ತು. ದೇಹದ ಹಲವು ಭಾಗಗಳು ಸಣ್ಣಪುಟ್ಟ ಗಾಯಗಳಿಂದ ಕೂಡಿದ್ದವು. ಪಂತ್ಗೆ ಬಹಳಷ್ಟು ಚರ್ಮ ನಷ್ಟವಾಗಿತ್ತು. ಆ ಅಪಘಾತದ ಸಮಯದಲ್ಲಿ ಅವರ ಕುತ್ತಿಗೆಯ ಹಿಂಭಾಗದಿಂದ ಮೊಣಕಾಲಿನವರೆಗೆ ದೇಹದ ಚರ್ಮವು ಸಂಪೂರ್ಣವಾಗಿ ಉದುರಿಹೋಗಿತ್ತು. ಕಾರಿನ ಗಾಜುನ್ನು ಪುಡಿ ಮಾಡಿಕೊಂಡು ಹೊರಗೆ ಬಂದ ಪಂತ್ರ ಬೆನ್ನಿನ ಮಾಂಸ ಮತ್ತು ಚರ್ಮ ಹೊರಗೆ ಬಂದಿತ್ತು" ಎಂದು ಹೇಳಿದ್ದಾರೆ.
"ರಿಷಭ್ ಒಬ್ಬ ಜಿಮ್ನಾಸ್ಟ್ ಆಗಿ ತರಬೇತಿ ಪಡೆದಿದ್ದಾರೆ. ಅವರು ಸಾಕಷ್ಟು ಚುರುಕಾಗಿರುತ್ತಾರೆ ಮತ್ತು ನಮ್ಯತೆಯನ್ನು ಹೊಂದಿದ್ದಾರೆ. ಹೀಗಾಗಿಯೇ ಅವರು ಇತ್ತೀಚಿಗಿನ ಟೆಸ್ಟ್ ಪಂದ್ಯದಲ್ಲಿ ಅಂತಹ ಪಲ್ಟಿಯನ್ನು ಹೊಡೆಯುತ್ತಿದ್ದಾರೆ. ಚೆನ್ನಾಗಿ ಅಭ್ಯಾಸ ಮತ್ತು ಪರಿಪೂರ್ಣತೆಯಿಂದ ಹೊಡೆದಿರುವ ಸಮರ್ಸಾಲ್ಟ್ ಪಲ್ಟಿ ಅದಾಗಿದೆ. ಆದರೂ ಅನಗತ್ಯ, ಬೇಕಿರಲಿಲ್ಲ!" ಎಂದು ಹೇಳಿದ್ದಾರೆ,(ಏಜೆನ್ಸೀಸ್).