

ಪ್ರಶಾಂತ ಭಾಗ್ವತ, ಉಡುಪಿ
ಭತ್ತ ಬೆಳೆದು ಜನರ ಹೊಟ್ಟೆ ತುಂಬಿಸುವ ಬೆಳೆಗಾರರ ಸಂಕಷ್ಟಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಪ್ರತಿವರ್ಷವೂ ಒಂದಲ್ಲ ಒಂದು ರೀತಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟದಿಂದ ಭತ್ತ ಬೆಳೆಗಾರರು ಕಣ್ಣೀರು ಸುರಿಸುವಂತಾಗಿದೆ.
ಪ್ರಸಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಇರುವ ದರ ಅತ್ಯಲ್ಪವಾಗಿದೆ. ಭತ್ತ ಬೆಳೆಯಲು ಕೃಷಿಕರು ಖರ್ಚು ಮಾಡಿದ ಮಟ್ಟಕ್ಕೂ ಬೆಲೆ ಸಿಗದಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿ ಭತ್ತಕ್ಕೆ 18 ರೂ.ನಿಂದ ಗರಿಷ್ಠ 22 ರೂ. ಮಾತ್ರ ಇದೆ. ಈ ದರಕ್ಕೆ ಭತ್ತ ಮಾರಾಟ ಮಾಡಿದರೆ ಇಂದಿನ ತುಟ್ಟಿ ಕಾಲದಲ್ಲಿ ಬೆಳೆಗಾರರ ಕುಟುಂಬ ಜೀವನ ನಿರ್ವಹಿಸಲು ಸಾಧ್ಯವೇ ಎನ್ನುವುದು ರೈತರ ಪ್ರಶ್ನೆಯಾಗಿದೆ.
ಭತ್ತ ಪ್ರದೇಶ ಹೆಚ್ಚಳ
2022-23ರಲ್ಲಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, 30,143 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು. 2023-24ರಲ್ಲಿ 36,509 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, 35,012 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಕೃಷಿ ಇಲಾಖೆಯ ಈ ಅಂಕಿ-ಅಂಶದ ಪ್ರಕಾರ ಕಳೆದ ವರ್ಷಕ್ಕಿಂತ ಈ ವರ್ಷ 500 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಉಡುಪಿ ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ ಪ್ರಸಕ್ತ 2024ರಲ್ಲಿ 4022 ಮಿ.ಮೀ. ಇದ್ದು, 4486 ಮಿ.ಮೀ. ಮಳೆ ಸುರಿದಿದ್ದು ಶೇ.15 ಹೆಚ್ಚುವರಿ ಮಳೆಯಾಗಿದೆ. ಕಳೆದ ವರ್ಷ 2023ರಲ್ಲಿ ವಾರ್ಷಿಕ ವಾಡಿಕೆ ಮಳೆ ಪ್ರಮಾಣಕ್ಕಿಂತ ಶೇ.22ರಷ್ಟು ಮಳೆ ಕೊರತೆಯಾಗಿತ್ತು. ಇದರಿಂದ ಭತ್ತದ ಸಸಿಗಳು ಬಿಸಿಲ ತಾಪಕ್ಕೆ ಒಣಗಿ ಬೆಳೆ ನಷ್ಟವಾಗಿತ್ತು. ಈ ವರ್ಷ ಹೆಚ್ಚುವರಿ ಬೆಳೆಯಿಂದ ಜಿಲ್ಲೆಯ ವಿವಿಧೆಡೆ ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿ ಹೋಗಿದ್ದವು.
ಎಲ್ಲರಿಗೂ ಊಟ ಮಾಡಲು ಅಕ್ಕಿ ಬೆಳೆದು ಕೊಡುವ ಬೆಳೆಗಾರರಿಗೆ ಭತ್ತ ಮಾರಾಟ ಮಾಡಲು ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ. ಬೆಂಬಲ ಬೆಲೆಯನ್ನೂ ನೀಡಿಲ್ಲ. ಹೀಗಾಗಿ ಕನಿಷ್ಠ ದರಕ್ಕೆ ಬೆಳೆಗಾರರಿಗೆ ಭತ್ತ ಮಾರಾಟ ಮಾಡುವ ಸಂದಿಗ್ಧತೆ ಉಂಟಾಗುತ್ತಿದೆ. ಕಷ್ಟಪಟ್ಟು ಬೆಳೆದ ಭತ್ತದ ಖರ್ಚು ಸಹ ಲಭಿಸುತ್ತಿಲ್ಲ. |ರಾಜೇಂದ್ರ ಬೆಚ್ಚಳ್ಳಿ. ಭತ್ತ ಕೃಷಿಕ, ಸಿದ್ದಾಪುರ ಉಡುಪಿ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಹಾಗೂ ಬೆಳೆಗಾಗರರಿಗೆ ಬೆಂಬಲ ಬೆಲೆಯನ್ನೂ ನೀಡುವಂತೆ ಈಗಾಗಲೇ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಹಿಂದೆ ಇದೇ ವಿಚಾರವಾಗಿ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭತ್ತ ಖರೀದಿಸುವ ಮಿಲ್ನವರಿಗೂ ಸಹ ದರ ಏರಿಸುವಂತೆ ಸಲಹೆ ನೀಡಲಾಗಿದೆ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ