

ರಾಘವೇಂದ್ರ ಪೈ ಗಂಗೊಳ್ಳಿ
ಕರಾವಳಿ ತೀರದ ಬಹುತೇಕ ಪ್ರದೇಶಗಳಲ್ಲಿ ಎರಡು ಭತ್ತದ ಬೆಳೆ ಬೆಳೆಯಲಾಗುತ್ತಿದ್ದು, ಮಳೆಗಾಲ ಮುಗಿದ ಬಳಿಕ ಮಾಡುತ್ತಿರುವ ಎರಡನೇ ಭತ್ತದ ಕೃಷಿ ನೀರಿಲ್ಲದೆ ಸೊರಗಿ ಹೋಗುತ್ತಿದೆ.
ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಸಾಲಾಡಿ ಎಂಬಲ್ಲಿ ನೂರಾರು ಎಕರೆ ಭತ್ತದ ಕೃಷಿ ನೀರಿಲ್ಲದೆ ಒಣಗಲು ಆರಂಭಿಸಿವೆ. ಮಳೆಗಾಲ ಮುಗಿದ ಬಳಿಕ ಎರಡನೇ ಬೆಳೆಗೆ ರೈತರು ಭತ್ತ ಸಸಿಗಳನ್ನು ನಾಟಿ ಮಾಡಿ ತಿಂಗಳು ಕಳೆದಿದ್ದರೂ ಕೃಷಿಗೆ ನೀರಿನ ಕೊರತೆ ಕಾಡಲಾರಂಭಿಸಿದೆ. ಗುಂಡೂರು ಡ್ಯಾಂನಿಂದ ವಾರಾಹಿ ನೀರನ್ನು ಕಾಲುವೆಗಳಲ್ಲಿ ಹರಿಸದ ಪರಿಣಾಮ ಈ ಭಾಗದ ಕೃಷಿಕರಿಗೆ ನೀರಿನ ಅಭಾವ ತಲೆದೋರಿದ್ದು, ನಾಲ್ಕೈದು ದಿನಗಳೊಳಗೆ ನೀರು ಹಾಯಿಸದಿದ್ದಲ್ಲಿ ಭತ್ತದ ಕೃಷಿ ಸಂಪೂರ್ಣ ಒಣಗಿಹೋಗುವ ಭೀತಿ ಎದುರಾಗಿದೆ.
ಇಲ್ಲಿ ಸುಮಾರು 40-45 ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದ್ದು, 100-150 ಎಕರೆ ಕೃಷಿ ಭೂಮಿಯಲ್ಲಿ ವರ್ಷದಲ್ಲಿ ಎರಡು ಭತ್ತದ ಬೆಳೆ ಬೆಳೆಯುತ್ತಿದ್ದಾರೆ. ಕೃಷಿಗೆ ನೀರಿನ ಅಭಾವ ಇಂದು ನಿನ್ನೆಯದಲ್ಲ. ಪ್ರತಿ ವರ್ಷ ಕೃಷಿಕರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಸಮಯಕ್ಕೆ ಸರಿಯಾಗಿ ವಾರಾಹಿ ನೀರನ್ನು ಹರಿಸದ ಪರಿಣಾಮ ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಬೇಸಾಯ ಮಾಡುವವರೇ ಕಡಿಮೆಯಾಗುತ್ತಿರುವಾಗ ಇಂದಿನ ದಿನಗಳಲ್ಲಿ ಬೇಸಾಯ ಮಾಡುವವರಿಗೆ ಅಗತ್ಯ ಸೌಲಭ್ಯ ಒದಗಿಸಿ ಪ್ರೋತ್ಸಾಹ ಉತ್ತೇಜನ ನೀಡಬೇಕಾಗಿದ್ದ ಇಲಾಖೆ ಅಧಿಕಾರಿಗಳು ಈ ಭಾಗದ ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಲುವೆಗಳ ಇಕ್ಕೆಲಗಳಲ್ಲಿರುವ ಅಡಕೆ, ರಬ್ಬರ್ ತೋಟದ ಮಾಲೀಕರು ಕಾಲುವೆಗೆ ದೊಡ್ಡ ದೊಡ್ಡ ಪಂಪ್‌ಸೆಟ್ ಅಳವಡಿಸಿ ನೀರನ್ನು ತೋಟಗಳಿಗೆ ಹಾಯಿಸುತ್ತಿದ್ದು, ಭತ್ತದ ಕೃಷಿಕರಿಗೆ ನೀರಿನ ಕೊರತೆಯಾಗಲು ಮತ್ತೊಂದು ಕಾರಣ ಎನ್ನಲಾಗುತ್ತಿದೆ.
ರೈತರಿಗೆ ಅಗತ್ಯವಾಗಿ ಬೇಕಾಗಿರುವ ಸಮರ್ಪಕ ನೀರಿನ ಪೂರೈಕೆ ಆಗದಿರುವುದು ಆಕ್ರೋಶಕ್ಕೆ ಗುರಿಯಾಗಿದೆ. ಅನೇಕ ವರ್ಷಗಳಿಂದ ನೀರಿನ ಸಮಸ್ಯೆ ಇದ್ದರೂ ಕೃಷಿ ಅಥವಾ ನೀರಾವರಿ ಇಲಾಖೆ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಇದರಿಂದ ರೈತರ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುತ್ತಿದ್ದು, ನಷ್ಟ ಅನುಭವಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಅದನ್ನು ಬಗೆಹರಿಸಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ವಾರಾಹಿ ನೀರನ್ನು ಗುಂಡೂರು ಡ್ಯಾಂನಿಂದ ಸರಿಯಾದ ಸಮಯಕ್ಕೆ ಬಿಡುತ್ತಿಲ್ಲ. ಇದರಿಂದ ಭತ್ತದ ಕೃಷಿಗೆ ತೊಂದರೆಯಾಗುತ್ತಿದ್ದು, ಭತ್ತದ ಸಸಿಗಳು ಒಣಗಿ ಹೋಗುವ ಸ್ಥಿತಿಗೆ ಬಂದಿದೆ. ಗದ್ದೆಗಳಿಗೆ ಸರಿಯಾದ ಸಂಪರ್ಕ ರಸ್ತೆ ಇಲ್ಲ ಮತ್ತು ಅಡಕೆ, ರಬ್ಬರ್ ಬೆಳೆಗಾರರು ಪಂಪ್‌ಸೆಟ್ ಬಳಸಿ ನೀರನ್ನು ತೋಟಗಳಿಗೆ ಹಾಯಿಸುತ್ತಿರುವುದ ಭತ್ತದ ಗದ್ದೆಗಳಿಗೆ ನೀರು ಸಾಕಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಕಾಲಕ್ಕೆ ಗದ್ದೆಗಳಿಗೆ ನೀರಿನ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಬೇಕು. -ನಾಗೇಂದ್ರ ಕೃಷಿಕರು ಬಂಟ್ವಾಡಿ https://www.vijayavani.net/talent-day-celebration-at-sahebarakatte-school https://www.vijayavani.net/cooperation-in-building-a-clean-karkala