

ಪ್ರತಿ ವಿಷಯದಲ್ಲೂ ಏನಾದರೊಂದು ಹೇಳಿಕೆ ಕೊಡುವುದರಲ್ಲಿ ರಾಮ್ ಗೋಪಾಲ್ ವರ್ಮಾ ಬಹಳ ಜನಪ್ರಿಯರು. ಕೆಲವೊಮ್ಮೆ ಹಾಗೆ ಪ್ರತಿಕ್ರಿಯೆ ಕೊಡುವುದಕ್ಕೆ ಹೋಗಿ, ಎಡವಟ್ಟಾಗಿದ್ದೂ ಇದೆ. ಈಗ ಮತ್ತೊಮ್ಮೆ ವರ್ಮಾ ಎಡವಟ್ಟು ಮಾಡಿಕೊಂಡಿದ್ದಾರೆ. ಸೋಮವಾರ ಅವರು ನೀಡಿದ ಒಂದು ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಇಷ್ಟಕ್ಕೂ ಏನೀ ಪ್ರಕರಣ ಎಂಬ ಪ್ರಶ್ನೆ ಇದ್ದರೆ, ಇಲ್ಲಿದೆ ಉತ್ತರ. ಸೋಮವಾರ ಮದ್ಯದಂಗಡಿಗಳು ತೆಗೆದು, ಜನ ಸಾಲುಗಟ್ಟಿ ನಿಂತು, ಮದ್ಯ ಖರೀದಿಸಿದ್ದಾರೆ. ಅದರಲ್ಲೂ ಬೆಂಗಳೂರಿನ ಬಡಾವಣೆಯಲ್ಲಿ ಹೆಣ್ಮಕ್ಕಳು ಸರದಿಯಲ್ಲಿ ನಿಂತಿದ್ದರ ಬಗ್ಗೆ ವರ್ಮಾ ಟ್ವೀಟ್ ಮಾಡಿದ್ದರು. ‘ಮದ್ಯದಂಗಡಿ ಮುಂದೆ ಯಾರು ನಿಂತಿದ್ದಾರೆ ಎಂದು ನೋಡಿ ...’ ಎಂದು ಕಾಲೆಳೆದಿದ್ದರು. ಈ ಟ್ವೀಟ್ ಕುರಿತು ಸಾಕಷ್ಟು ಜನ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಪೈಕಿ ಗಾಯಕಿ ಸೋನಾ ಮಹಾಪಾತ್ರ ಸಹ ಆರ್.ಜಿ.ವಿ ಮಾತುಗಳನ್ನು ಖಂಡಿಸಿದ್ದಾರೆ. ಮಹಿಳೆಯರಿಗೆ ಮದ್ಯ ಖರೀದಿಸುವ ಮತ್ತು ಕುಡಿಯುವ ಹಕ್ಕಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಡಿಯರ್ ಮಿಸ್ಟರ್ ಆರ್‌ಜಿವಿ. ನಿಮಗೆ ಶಿಕ್ಷಣದ ಅಗತ್ಯವಿದೆ. ಗಂಡಸರ ತರಹ ಹೆಂಗಸರಿಗೂ ಮದ್ಯವನ್ನು ಖರೀದಿಸುವ ಮತ್ತು ಕುಡಿಯುವ ಹಕ್ಕಿದೆ. ಆದರೆ, ಯಾರಿಗೂ ಕುಡಿದು ಗಲಾಟೆ ಮಾಡುವ ಹಕ್ಕಿಲ್ಲ’ ಎಂದು ಹೇಳಿದ್ದಾರೆ.
ಇನ್ನು ಕೆಲವರು, ‘ಯಾವುದೋ ಒಂದೇ ಒಂದು ಫೋಟೋ ಇಟ್ಟುಕೊಂಡು ಮಹಿಳೆಯರ ವಿರುದ್ಧ ಮಾತನಾಡುವುದು ಸರಿಯಲ್ಲ. ಅಂಕಿ-ಅಂಶಗಳನ್ನು ನೋಡಿ, ಯಾರು ಹೆಚ್ಚು ಹಿಂಸೆಗೆ ಒಳಗಾಗಿದ್ದಾರೆ ಎಂಬ ವಿಷಯ ಸ್ಪಷ್ಟವಾಗುತ್ತದೆ’ ಎಂದು ಹೇಳಿದ್ದಾರೆ.