ಪಡುಕರೆ ರಸ್ತೆ ಕಾಮಗಾರಿಗೆ ಮರುಜೀವ

road-1
Published on

ವಿಜಯವಾಣಿ ಸುದ್ದಿಜಾಲ ಕೋಟ

ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣೂರು ಪಡುಕರೆಯ ಜಟ್ಟಿಗೇಶ್ವರ ದೇಗುಲದ ಸಮೀಪ ರಸ್ತೆ ಸೌಲಭ್ಯದಿಂದ ವಂಚಿತರಾಗಿರುವ ಮೂವತ್ತಕ್ಕೂ ಅಧಿಕ ಕುಟುಂಬಗಳು ಈ ಕುರಿತು ತಹಸೀಲ್ದಾರ್‌ಗೆ ದೂರು ನೀಡಿದ್ದು, ತಹಸೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ನೇತೃತ್ವದಲ್ಲಿ ಶನಿವಾರ ದಿಢೀರ್ ರಸ್ತೆ ಕಾಮಗಾರಿ ನಡೆದಿದೆ.

ಪರಿಶಿಷ್ಟ ಜಾತಿ ಪಂಗಡ ಸಹಿತ ವಿವಿಧ ಸಮುದಾಯಕ್ಕೆ ಸೇರಿದ ಕುಟುಂಬಗಳು ಈ ಭಾಗದಲ್ಲಿ ವಾಸವಿದ್ದು, ಕೃಷ್ಣ ನೇತೃತ್ವದ ಸ್ಥಳೀಯರ ತಂಡ ರಸ್ತೆ ಸಮಸ್ಯೆ ಕುರಿತು ಸ್ಥಳೀಯಾಡಳಿತದ ಗಮನಕ್ಕೆ ತಂದಿದೆ. ಪೂರಕ ಸ್ಪಂದನೆ ದೊರೆಯದಿದ್ದರಿಂದ ದಂಡಾಧಿಕಾರಿಗೆ ಮನವಿ ನೀಡಿದೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ನೇತೃತ್ವದಲ್ಲಿ ಮಂಜು ಬಿಲ್ಲವ, ಚಲುವರಾಜು, ಸುರೇಶ್ ಬಂಗೇರ, ಪ್ರತಾಪ್ ಶೆಟ್ಟಿ, ಕೋಟ ಠಾಣಾಧಿಕಾರಿ ರಾಘವೇಂದ್ರ, ಸುಧಾ ಪ್ರಭು ಒಳಗೊಂಡ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ.

ಇದೇ ವೇಳೆ ರಸ್ತೆ ಕಾರ್ಯಾಚರಣೆ ವಿರೋಧಿಸಿ ಕೆಲವರು ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆಸಿದ್ದು, ಈ ಸಂದರ್ಭ ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಿ ತಹಸೀಲ್ದಾರ್ ಎಚ್ಚರಿಕೆ ನೀಡಿದರು. ಕಾರ್ಯಾಚರಣೆಗೆ ಪೊಲೀಸ್ ಇಲಾಖೆ, ಮೆಸ್ಕಾಂ, ಅರಣ್ಯ ಸಹಿತ ವಿವಿಧ ಇಲಾಖೆಗಳು ಸಹಕರಿಸಿದ್ದು, ಸ್ಥಳೀಯರು ಕೃತಜ್ಞತೆ ಸಲ್ಲಿಸಿದರು.

ಹೋರಾಟದ ಹಿನ್ನೆಲೆ

ಕೋಟ ಪಂಚಾಯಿತಿ ವ್ಯಾಪ್ತಿಯ ಮಣೂರುಪಡುಕರೆ 5ನೇ ವಾರ್ಡ್ ಸಮುದ್ರ ತಟದ ಸಮೀಪ ವಾಸ್ತವ್ಯ ಹೊಂದಿರುವ ಅನೇಕ ಕುಟುಂಬಗಳು ಹಲವು ವರ್ಷಗಳಿಂದ ರಸ್ತೆ ಸಹಿತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೂ ಮೊದಲು ಒಂದು ಬಾರಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಈ ಸಂರ್ಭ ಒಂದೆರಡು ಪರಿಶಿಷ್ಟ ಕುಟುಂಬಗಳ ವಿರೋಧದಿಂದ ಯೋಜನೆ ಮರೀಚಿಕೆಯಾಗಿ ಉಳಿದಿತ್ತು. ರಸ್ತೆ ನಿರ್ಮಾಣಕ್ಕಾಗಿ ಕೃಷ್ಣ ಬಂಗೇರ ಮತ್ತು ತಂಡ ಹಲವು ವರ್ಷಗಳ ಹಿಂದೆಯೇ ಹೋರಾಟಕ್ಕೆ ಧುಮುಕಿತ್ತು.

ರಸ್ತೆ ನಿರ್ಮಾಣದಲ್ಲಿ ಒಂದೆರಡು ಕುಟುಂಬಗಳು ಅಡ್ಡಿಮಾಡಿದ್ದು, ಈ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಮಾತುಕತೆ ನಡೆಸುವ ಮೂಲಕ ಪರಿಹರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ತಾಲೂಕು ದಂಡಾಧಿಕಾರಿಗಳ ಮೊರೆಹೊಗಿದ್ದು, ಅವರ ನೇತೃತ್ವದಲ್ಲಿ ಇಂದು ಎಲ್ಲರ ಕನಸು ನನಸಾಗಿದೆ. -ಪ್ರದೀಪ್ ಸಾಲಿಯಾನ್ ಸ್ಥಳೀಯ ವಾರ್ಡ್ ಪ್ರತಿನಿಧಿ https://www.vijayavani.net/re-establishment-of-gangolli-shrine https://www.vijayavani.net/koti-chennai-kambalotsava-in-adva

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net