ಬಬ್ಬುಕುದ್ರು ಅಭಿವೃದ್ಧಿಗೆ ಮರು ಜೀವ?

gan (1)
Published on

ರಾಘವೇಂದ್ರ ಪೈ ಕುಂದಾಪುರ ಕುಂದಾಪುರ ನಗರದ ಸಮೀಪದಲ್ಲೇ ಇರುವ ಪ್ರಾಕೃತಿಕ ಸೌಂದರ್ಯದ ಬಬ್ಬುಕುದ್ರು ಪ್ರದೇಶದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಬೇಕಾದ ಎಲ್ಲ ಅವಕಾಶ ಇದ್ದರೂ ಸರ್ಕಾರದ ಮಟ್ಟದಲ್ಲಿ ಪೂರಕ ನೆರವು ಸಿಗದ ಕಾರಣ ದಶಕಗಳ ಪ್ರಯತ್ನ ಸಫಲವಾಗಿಲ್ಲ. ಆದರೆ ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುಂದಾಪ್ರ ಕನ್ನಡ ಉತ್ಸವದಲ್ಲಿ, ಕುಂದಾಪುರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆ ಹೇಳಿಕೆ ನೀಡಿದ್ದು, ನನೆಗುದ್ದಿಗೆ ಬಿದ್ದಿದ್ದ ಬಬ್ಬುಕುದ್ರು ಪ್ರದೇಶ ಅಭಿವೃದ್ಧಿ ಯೋಜನೆ ಮುನ್ನಲೆಗೆ ಬಂದಿದೆ.

ಹೂಳು ತುಂಬಿದೆ

ನಗರಕ್ಕೆ ಹೊಂದಿಕೊಂಡಿರುವ ಪಂಚಗಂಗಾವಳಿ ನದಿ, ಗಂಗೊಳ್ಳಿ ಬಂದರು ನಗರಿಯ ಮಧ್ಯದಲ್ಲಿರುವ ಜನವಸತಿ ಇಲ್ಲದ 24 ಎಕರೆ ಬಬ್ಬುಕುದ್ರು ಪ್ರದೇಶ ಕಳೆಗುಂದಿದೆ. ಈ ಕುದ್ರುವಿನಿಂದ ಕುಂದಾಪುರದ ಕಡೆ ಇರುವ 500 ಮೀಟರ್ ಅಗಲದ ನದಿ, 1,500 ಮೀ. ಪ್ರದೇಶದಲ್ಲಿ ಸಂಪೂರ್ಣ ಹೂಳು ತುಂಬಿಕೊಂಡಿದೆ.

*ಇತಿಹಾಸದಲ್ಲಿದೆ: ಕುಂದಾಪುರದ ಹಲವು ಗ್ರಾಮಗಳಲ್ಲಿ ಶಾಸನದ ಅಧ್ಯಯನ ಮಾಡಿದ್ದ ಇತಿಹಾಸ ಸಂಶೋಧಕ ದಿ.ಗುರುರಾಜ ಭಟ್ಟ, ದಿ.ವಸಂತ ಶೆಟ್ಟಿ, ಪಿ.ಎಸ್.ಶಾಸ್ತ್ರಿ, ವಿದ್ವಾಂಸ ಮೆಕೆಂಜಿ 1,800ರಲ್ಲಿ ಪಂಚಗಂಗಾವಳಿಯ ಸಾಂಸ್ಕೃತಿಕ ಇತಿಹಾಸಕ್ಕೆ ಬೇಕಾದ ಮಾಹಿತಿ ಸಂಗ್ರಹಿಸಿದ್ದಾರೆ. ಹೆಮಿಲ್ಟನ್ ಅಲೆಕ್ಸಾಂಡ್, ಎಡನ್ ಮಸ್ಕತ್, ಕೂಟೊ ಮೊದಲಾದ ವಿದೇಶಿಗರೂ ಪಂಚಗಂಗಾವಳಿಯ ಮಹತ್ವವನ್ನು ಅಧ್ಯಯನದಲ್ಲಿ ತಿಳಿಸಿದ್ದಾರೆ ಎಂದು ಇತಿಹಾಸ ತಜ್ಞ ವಸಂತ ಮಾಧವ ಉಲ್ಲೇಖಿಸಿದ್ದಾರೆ.

ಬಲುಹೊನ್ನೆ ನೆಡುತೋಪು

ಅರಣ್ಯ ಇಲಾಖೆ ಅಧೀನದಲ್ಲಿರುವ ಬಬ್ಬುಕುದ್ರು (ಕುದ್ರು ಎಂದರೆ ದ್ವೀಪ)ವನ್ನು ಬಲುಹೊನ್ನೆ ನಡುತೋಪು ಎಂದೂ ಕರೆಯಲಾಗುತ್ತದೆ. ಸ್ಥಳೀಯರು ಮೀನುಗಾರಿಕೆ ಚಟುವಟಿಕೆಗಳಿಗಾಗಿ ಮಾತ್ರ ಇಲ್ಲಿಗೆ ಭೇಟಿ ನೀಡುತ್ತಾರೆ. ಸಣ್ಣ ದೋಣಿಗಳ ಮೂಲಕ ತಲುಪಬಹುದು. ಇಲ್ಲಿನ ಮರಗಳ ಕಾಂಡ ಪ್ರವಾಹದ ಗುರುತು ಹೊಂದಿವೆ. ಮರಳು ತೀರದ ಕೆಲವು ಭಾಗಗಳಲ್ಲಿ ಹುಲ್ಲಿನ ದೊಡ್ಡ ಸ್ಟಾೃಂಡ್‌ಗಳಂತಿವೆ. ಏಡಿಗಳಂತಹ ನೂರಾರು ಸಮುದ್ರ ಜೀವಿಗಳಿಗೆ ನೆಲೆಯಾಗಿದೆ.

ದಶಕಗಳ ಬೇಡಿಕೆ

ಬಬ್ಬುಕುದ್ರು ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಮಾಡಬೇಕೆಂಬ ಪ್ರಸ್ತಾವ ದಶಕಗಳಿಂದ ಸರ್ಕಾರದ ಕಡತಗಳಲ್ಲಿ ಗೆದ್ದಲು ತಿನ್ನುತ್ತಿದೆ. ದಶಕದ ಹಿಂದೆ ಈ ಬಗ್ಗೆ ಸಮೀಕ್ಷೆ ನಡೆಸಿದ ಲೋಕೋಪಯೋಗಿ, ಪ್ರವಾಸೋದ್ಯಮ ಇಲಾಖೆ ಬಳಿಕ ಸುಮ್ಮನಾದವು. ಅರಣ್ಯ ಇಲಾಖೆ ಈ ಪರಿಸರ ಅಭಿವೃದ್ಧಿಗೆ ಶ್ರಮಿಸಿತ್ತಾದರೂ, ಆಸಕ್ತ ಅಧಿಕಾರಿಗಳಿಗೆ ಸರ್ಕಾರದಿಂದ ಬೆಂಬಲ ಸಿಗಲಿಲ್ಲ. ಪಂಚಗಂಗಾವಳಿ ಮೂಲಕ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆಯಾಗಬೇಕು. ಪ್ರವಾಸೋದ್ಯಮವಾಗಿ ಬಬ್ಬುಕುದ್ರು ಅಭಿವೃದ್ಧಿಯಾಗಬೇಕು ಎನ್ನುವ ಒತ್ತಾಯ ಇದ್ದರೂ ಈವರೆಗೂ ಈಡೇರಿಲ್ಲ.

ಪ್ರಕೃತಿಯ ಸೌಂದರ್ಯದ ಗಣಿಯಂತಿರುವ ಪಂಚಗಂಗಾವಳಿಯ ಬಬ್ಬುಕುದ್ರುವನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸಬೇಕು ಎನ್ನುವ ಕನಸಿನ ಯೋಜನೆ ಸಾಕಾರಗೊಳಿಸಲು ಮಾಡಿರುವ ಪ್ರಯತ್ನ ನದಿ ರೋದನವಾಗಿದೆ.-ಯು.ಎಸ್.ಶೆಣೈ, ಪಂಚಗಂಗಾವಳಿ ಉತ್ಸವ ರೂವಾರಿ ಪ್ರವಾಸೋದ್ಯಮ ಇಲಾಖೆ ಜಿಲ್ಲೆಯಲ್ಲಿ 80 ಸ್ಥಳಗಳನ್ನು ಪ್ರವಾಸೋದ್ಯಮ ದೃಷ್ಟಿಯಲ್ಲಿ ಅಭಿವೃದ್ಧಿಪಡಿಸಬಹುದು ಎಂದು ಗುರುತಿಸಿದೆ. ಈ ಪೈಕಿ 48 ಸ್ಥಳಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ.ನಿಧೀಶ್ ಹೊಳ್ಳ ಕೆ.ಜೆ.-ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇರುವ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಕೋಡಿ ಬೀಚ್ ಸೇರಿದಂತೆ ವಿವಿಧೆಡೆಗೆ ಭೇಟಿ ನೀಡಿದ್ದು, ಬಬ್ಬುಕುದ್ರು ಅಭಿವೃದ್ಧಿ ಕುರಿತು ಇಲಾಖೆಗಳಿಂದ ಮಾಹಿತಿ ಪಡೆದು ಪರಿಶೀಲಿಸಲಾಗುವುದು.-ಸ್ವರೂಪಾ, ಉಡುಪಿ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net