

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಸ್ಥರು ಪಡೆದಿರುವ ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂದಿರುಗಿಸಬೇಕು. ಜತೆಗೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.
ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಂಚೆ ಮಸಿಯಾಗಿದೆ. ಮುಂದೆ ತಮ್ಮ ಮುಖಕ್ಕೆ ಮಸಿಯಾಗುವ ಮುನ್ನ ನಿವೇಶನವನ್ನು ಹಿಂದಿರುಗಿಸಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.
14 ನಿವೇಶನಗಳನ್ನು ಇಟ್ಟುಕೊಂಡಿರುವ ಸಿದ್ದರಾಮಯ್ಯ ಸಮಾಜವಾದಿ ಆಗಲು ಹೇಗೆ ಸಾಧ್ಯ? ಅಷ್ಟೊಂದು ನಿವೇಶನಗಳಿಂದ ನೀವೇನೂ ಮಾಡಬೇಕು? ಎಲ್ಲವನ್ನು ಮುಡಾಗೆ ವಾಪಸ್ ಕೊಟ್ಟುಬಿಡಿ. ನಿಮ್ಮ ಘನತೆಯೂ ಹೆಚ್ಚುತ್ತದೆ. ವಾಪಸ್ ಕೊಟ್ಟರೆ ತಪ್ಪು ಒಪ್ಪಿಕೊಂಡಂತೆ ಆಗುತ್ತದೆ ಎನ್ನುವುದು ಬಿಡಿ. ಪ್ರತಿಷ್ಠೆಯನ್ನು ಬಿಟ್ಟು ನಿವೇಶನ ಒಪ್ಪಿಸಿ, ದೊಡ್ಡತನ ಮೆರೆಯಿರಿ. ನಿಮಗೆ ಇಬ್ಬರು ಮಕ್ಕಳಿದರು. ಅವರಲ್ಲಿ ಒಬ್ಬರು ನಿಧನರಾಗಿದ್ದಾರೆ. ಇರುವ ಇನ್ನೊಬ್ಬ ಮಗನಿಗೆ ಇನ್ನೆಷ್ಟು ಬೇಕು ಎಂದರು.
ಈ ಮೊದಲೇ ಹೇಳಿದ್ದೆ, ನಿಮ್ಮ 3.14 ಎಕರೆ ಜಮೀನಿನಲ್ಲಿ ಶಾಲೆ ತೆರೆಯಿರಿ, ಬೇರೆ ಕಲ್ಯಾಣ ಯೋಜನೆಗಳ ಕೇಂದ್ರಗಳನ್ನು ಸ್ಥಾಪನೆ ಮಾಡಿ ಅಂತ. ಏಕೆಂದರೆ ಅಲ್ಲಿ ಅಹಿಂದ ಜನರೇ ಹೆಚ್ಚಾಗಿ ವಾಸ ಮಾಡುತ್ತಿರುವುದು. ಆದ್ದರಿಂದ ಈಗಲೂ ಕಾಲ ಮಿಂಚಿಲ್ಲ. ನಿವೇಶನ ವಾಪಸ್ ಕೊಟ್ಟುಬಿಡಿ ಎಂದು ಸಲಹೆ ಹೇಳಿದರು.
ಮುಡಾ ವಿಚಾರದಲ್ಲಿ ಎಲ್ಲರೂ ಸತ್ಯವಂತರೆ? ಕುಮಾರಸ್ವಾಮಿ ಸತ್ಯವಂತರೆ, ಯಡಿಯೂರಪ್ಪ ಸತ್ಯವಂತರೆ. ಆದರೆ ಎಲ್ಲ ಶಾಸಕರು ಕೈಚಾಚಿ ಕುಳಿತ್ತಿದ್ದಾರೆ. ನಾನು ಮತ್ತು ಶ್ರೀವತ್ಸ ಮಾತ್ರ ಕಾಲುಚಾಚಿ ಕುಳಿತ್ತಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ಮುಡಾ ನಿವೇಶನ ಹಗರಣವನ್ನು ತನಿಖೆ ಮಾಡಬೇಕೆಂದು ಅಧಿಕಾರಿಗಳನ್ನು ಬೇರೆ ಕಡೆ ವರ್ಗ ಮಾಡಲಾಯಿತು. ಆದರೆ ಅವರು ಮತ್ತೆ ವಾಪಸ್ ಬಂದಿದ್ದಾರೆ. ಮುಡಾದಲ್ಲಿ ಇರುವ ಸಿಸಿ ಕ್ಯಾಮರಾಗಳನ್ನು ಕಿತ್ತು ಬಿಸಾಕುತ್ತಿದ್ದಾರೆ. ಇದನ್ನೆಲ್ಲ ಹೊಸದಾಗಿ ಬಂದಿರುವ ಆಯುಕ್ತರು ಸುಮ್ಮನೆ ನೋಡುತ್ತ ಕುಳಿತ್ತಿದ್ದಾರೆ. ಮುಡಾಗೆ ತಿರುಗಿ ಬಂದಿರುವವರು ನಗರಾಭಿವೃದ್ಧಿ ಸಚಿವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅಲ್ಲಿರುವವರನ್ನು ಹೊರಗೆ ಕಳುಹಿಸದ ಹೊರತು ಯಾವುದೇ ತನಿಖೆಯು ನಡೆಯುವುದಿಲ್ಲ. ಏನೂ ಆಗುವುದಿಲ್ಲ.ಎಚ್.ವಿಶ್ವನಾಥ್, ಎಂಎಲ್‌ಸಿ