

ಶಿವಮೊಗ್ಗ: ನಿವೃತ್ತ ಕೆಎಸ್ಆರ್ಪಿ ಎಸ್ಐ ಒಬ್ಬರ ಕೊಲೆ ಪ್ರಕರಣವನ್ನು ಶಿರಾಳಕೊಪ್ಪ ಠಾಣೆಯ ಪೊಲೀಸರು ಭೇಧಿಸಿದ್ದಾರೆ. ತನಿಖೆಯ ನಂತರ ಪೊಲೀಸರೇ ಬೆಚ್ಚಿ ಬೀಳುವಂತಹ ಮಾಹಿತಿಗಳು ಒಂದೊಂದಾಗೇ ಹೊರ ಬಿದ್ದಿವೆ. ಇದೀಗ ನಿವೃತ್ತ ಎಸ್ಐ ನಾಗೇಂದ್ರಪ್ಪ ಕೊಲೆಯಾಗಿ ಹೋಗಲು ಅವರ ಮಕ್ಕಳೇ ಕಾರಣ ಎಂಬುದು ತನಿಖೆಯ ಮೂಲಕ ತಿಳಿದು ಬಂದಿದೆ.
ನಿವೃತ್ತ ಎಸ್ಐ ನಾಗೇಂದ್ರಪ್ಪ ಅವರಿಗೆ ಎರಡು ಮದುವೆಯಾಗಿತ್ತು. ನಾಗೇಂದ್ರಪ್ಪ ತಮ್ಮ ಜಮೀನನ್ನು ಎರಡನೇ ಹೆಂಡತಿ ಮಗುವಿಗೆ ವರ್ಗಾವಣೆ ಮಾಡಲು ನಿರ್ಧರಿಸಿದ್ದರು. ಇದು ಅಪ್ಪ-ಮಕ್ಕಳ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಹೀಗಾಗಿ ಮಕ್ಕಳಾದ ಮಂಜುನಾಥ್ ಹಾಗೂ ಉಮೇಶ್ ಈ ಹಿಂದೆಯೇ ತಂದೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಸುಪಾರಿಯನ್ನೂ ನೀಡಿದ್ದರು.
ಕಳೆದ ನವೆಂಬರ್ 9 ರಂದು ಮೊದಲು ಬಾರಿಗೆ ನಾಗೇಂದ್ರಪ್ಪ ಮೇಲೆ ಕೊಲೆ ಯತ್ನ ನಡೆದಿತ್ತು. ಲಗೇಜ್ ಆಟೋದಿಂದ ನಾಗೇಂದ್ರಪ್ಪ ಬೈಕ್ಗೆ ಢಿಕ್ಕಿ ಹೊಡೆಸಲಾಗಿತ್ತು. ಆದರೆ ಅದೃಷ್ಟವಶಾತ್ ನಾಂಗೇಂದ್ರಪ್ಪ ಘಟನೆಯಿಂದ ಪಾರಾಗಿದ್ದರು. ಈ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ.
ಆದರೆ ಎರಡನೇ ಬಾರಿಗೆ ಅದೃಷ್ಟ ಕೈಕೊಟ್ಟಿತ್ತು. ಮಕ್ಕಳು ನೀಡಿದ ಸುಫಾರಿಗೆ ಕಳೆದ ನವೆಂಬರ್ 29ರಂದು ನಾಗೇಂದ್ರಪ್ಪ ಕೊಲೆಯಾಗಿ ಹೋಗಿದ್ದರು. ಈ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿತ್ತು.
ನಮಗೆ ಆಸ್ತಿ ಕೊಟ್ಟಿಲ್ಲ ಎಂಬ ದ್ವೇಷದಲ್ಲಿ ತಂದೆಯನ್ನೇ ಕೊಲೆ ಮಾಡಲು ಮಕ್ಕಳಾದ ಮಂಜುನಾಥ್ ಹಾಗೂ ಉಮೇಶ್ ಸೇರಿಕೊಂಡು ಭೋಗಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಎಂಬುವರಿಗೆ ಸುಪಾರಿ ಕೊಟ್ಟಿದ್ದರು. ಕೊಲೆಯಾದ ದಿನ ನಾಗೇಂದ್ರಪ್ಪ, ಭದ್ರಾವತಿ ಕೋರ್ಟ್ಗೆ ಹೋಗಿ, ಶಿಕಾರಿಪುರಕ್ಕೆ ಮರಳುತ್ತಿದ್ದರು. ಈ ವೇಳೆ ಸುಫಾರಿ ಕಿಲ್ಲರ್ಗಳು ನಾಗೇಂದ್ರಪ್ಪ ಅವರನ್ನು ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದಾರೆ.
ತಮ್ಮ ಆಟೋದಲ್ಲಿ ನಾಗೇಂದ್ರಪ್ಪ ಅವರನ್ನು ಹತ್ತಿಸಿಕೊಂಡ ಸುಪಾರಿ ಕಿಲ್ಲರ್ಗಳು, ಅವರನ್ನು ಪುಣೇದಹಳ್ಳಿ ಗ್ರಾಮದ ಬಳಿ ಕರೆದೊಯ್ದು, ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿ, ಉಸಿರುಗಟ್ಟಿಸಿ ಸಾಯಿಸಿದ್ದಾರೆ. ನಂತರ ಉಡುಗಣಿ ಗ್ರಾಮದಿಂದ ಕುಸ್ಕೂರು ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಚರಂಡಿಯೊಂದರಲ್ಲಿ ಸುಪಾರಿ ಕಿಲ್ಲರ್ಗಳು ಶವವನ್ನು ಎಸೆದಿದ್ದಾರೆ.
ಕಳೆದ ನವೆಂಬರ್ 29ರಂದು ಚರಂಡಿಯಲ್ಲಿ ಸಿಕ್ಕಿದ ಶವದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು. ನಂತರ ಮಂಜುನಾಥ್, ಉಮೇಶ್, ರಿಜ್ವಾನ್, ಹಬೀಬ್ ಉಲ್ಲಾ ಹಾಗೂ ಸುಹೇಲ್ ಬಾಷಾ ಬಂಧಿಸಿ ಪೊಲೀಸರು ತನಿಖೆಗೆ ಒಳಪಡಿಸಿದ್ದರು. ಇದೀಗ ಪೊಲೀಸ್ ತನಿಖೆಯ ಮೂಲಕ ನಿವೃತ್ತ ಎಸ್ಐ ನಾಗೇಂದ್ರಪ್ಪ ಕೊಲೆಗೆ ಅವರ ಮಕ್ಕಳೇ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ.