ಕುಂದಾಪುರ: ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ವರ್ಷಗಳ ಬೇಡಿಕೆಗೆ ರಾಜ್ಯ ಸರ್ಕಾರ ಭಾಗಶಃ ಒಪ್ಪಿಗೆ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ರಾಜ್ಯ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಶಾಸಕರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು. ಮಂಗಳೂರನ್ನು ರೈಲ್ವೆ ವೃತ್ತವಾಗಿ ಮಾಡಬೇಕೆಂಬ ಬೇಡಿಕೆಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ವತಿಯಿಂದ ಎರ್ನಾಕುಲಂ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಮತ್ತು ತಿರುವನಂತಪುರಂ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲನ್ನು ಮೂಡ್ಲಕಟ್ಟೆ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಸ್ವಾಗತ ಕೋರಿ ಮಾತನಾಡಿದರು.
ಮಂಗಳೂರಿನಿಂದ ಗೋವಾ ಹೋಗುವ ವಂದೇ ಭಾರತ್ ರೈಲು ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಳಿಸಬಾರದು ಬದಲಾಗಿ ಈ ರೈಲನ್ನು ಮುಂಬೈಗೆ ವಿಸ್ತರಿಸಬೇಕೆಂಬ ಮನವಿ ಮಾಡಿಕೊಳ್ಳಲಾಗಿದೆ. ಉಡುಪಿ ರೈಲ್ವೆ ನಿಲ್ದಾಣವನ್ನು ಅಮೃತ್ ಭಾರತ್ ಯೋಜನೆಯಡಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಕಾರವಾರದವರೆಗೆ ಮತ್ತೊಂದು ರೈಲು ನೀಡಬೇಕೆಂದು ಬೇಡಿಕೆ ಇಡಲಾಗಿದೆ. ಅರೆಬೆಟ್ಟದಲ್ಲಿ ಸ್ವಲ್ಪ ಅಭಿವೃದ್ಧಿ ಮಾಡಿ ನಿಯಮ ಸರಳೀಕರಣ ಮಾಡಿದರೆ ರೈಲು ಸರಾಗವಾಗಿ ಬರಲು ಅನುಕೂಲವಾಗುತ್ತದೆ ಎಂಬುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಕುಂದಾಪುರದಲ್ಲಿ ರೈಲ್ವೆಗೆ ನೀರು ತುಂಬಿಸುವ ಯೋಜನೆಗೆ ಪ್ರಸ್ತಾಪ ಸಲ್ಲಿಸಲಾಗಿದ್ದು, ಕುಂದಾಪುರ ರೈಲ್ವೆ ನಿಲ್ದಾಣ ಅಭಿವೃದ್ಧಿಪಡಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸೀನಿಯರ್ ಟ್ರಾಫಿಕ್ ಮ್ಯಾನೇಜರ್ ದಿಲೀಪ್ ಭಟ್, ಕೊಂಕಣ ರೈಲ್ವೆ ಕಮರ್ಷಿಯಲ್ ಸೂಪರ್‌ವೈಸರ್ ಎಸ್.ಕೆ.ಭಟ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಕೆ.ಎಸ್., ಸತೀಶ್ ಪೂಜಾರಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ಕಾರ್ಯದರ್ಶಿ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಪದ್ಮನಾಭ ಶೆಣೈ, ವಿವೇಕ ನಾಯಕ್, ರಾಜೇಶ ಕಾವೇರಿ, ಉದಯ ಭಂಡಾರ್‌ಕಾರ್, ತನ್ಮಯ್ ಭಂಡಾರ್‌ಕಾರ್, ನಾಗರಾಜ ಆಚಾರ್, ರಾಜು ಮೊಗವೀರ, ರಾಘವೇಂದ್ರ ಶೇಟ್, ಶ್ರೀಧರ ಸುವರ್ಣ, ಧರ್ಮಪ್ರಕಾಶ್, ಸರಸ್ವತಿ ಪುತ್ರನ್, ಕಲ್ಪನಾ ಭಾಸ್ಕರ್, ಆಶಾ, ಶಿವರಾಮ ಶೆಟ್ಟಿ, ಕಂದಾವರ ಗ್ರಾಪಂ ಅಧ್ಯಕ್ಷೆ ಅನುಪಮಾ ಶೆಟ್ಟಿ, ಹೆರಾಲ್ಡ್ ಡಿಸೋಜ, ಹ್ಯಾರಿ ಡಿಮೆಲ್ಲೊ, ವಿಲ್ಸನ್ ಅಲ್ಮೇಡಾ, ರಾಜೇಶ ಕಡ್ಗಿಮನೆ, ದಿವಾಕರ ಕಡ್ಗಿ, ರೋಹಿಣಿ ಪೈ ಮೊದಲಾದವರು ಉಪಸ್ಥಿತರಿದ್ದರು.
ಪ್ರಯಾಣಿಕರಿಗೆ ಅನುಕೂಲ
ಕುಂದಾಪುರ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಹಾಗೂ ಕರಾವಳಿ ಭಾಗದ ರೈಲ್ವೆಗೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರು ಮಹತ್ವದ ಕೊಡುಗೆ ನೀಡುತ್ತಿದ್ದು, ಕರಾವಳಿ ಭಾಗದ ಜನರಿಗೆ ರೈಲ್ವೆ ಸೌಲಭ್ಯ ಅನುಕೂಲವಾಗಲಿದೆ.

ತಿರುವನಂತಪುರಂ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಮತ್ತು ಎರ್ನಾಕುಲಂ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲುಗಳಿಗೆ ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಿ ಕೇಂದ್ರ ಸಚಿವರು ಆದೇಶ ನೀಡಿದ್ದು, ಇವೆರಡು ರೈಲು ಕುಂದಾಪುರದಲ್ಲಿ ನಿಲುಗಡೆ ನೀಡುತ್ತಿರುವುದರಿಂದ ಕೊಲ್ಲೂರಿಗೆ ತೆರಳುವ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.
-ಕೋಟ ಶ್ರೀನಿವಾಸ ಪೂಜಾರಿ ಸಂಸದ