

ಕಾಸರಗೋಡು: ಕುಂಬಳೆ ಸನಿಹದ ಕಳತ್ತೂರಿನ ಕಿದೂರು ಮುಂಡಿಕೆರೆ ಎಂಬಲ್ಲಿ ಬಾವಿಗೆ ಬಿದ್ದ ನವಿಲನ್ನು ಕುಂಬಳೆ ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಬಳೆ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರು ಅಗ್ನಿಶಾಮಕ ದಳಕ್ಕೆ ಸಾಥ್ ನೀಡಿದ್ದು, ನವಿಲು ಸುರಕ್ಷಿತವಾಗಿ ಕಾಡಿಗೆ ಸೇರಲು ಸಹಕರಿಸಿದ್ದಾರೆ.
ಸ್ಥಳೀಯ ನಿವಾಸಿಯೊಬ್ಬರ ಬಾವಿಗೆ ನವಿಲು ಬಿದ್ದ ವಿಷಯವನ್ನು ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರೊಬ್ಬರು ಅಗ್ನಿಶಾಮಕ ದಳದವರಿಗೆ ನೀಡಿರುವುದಲ್ಲದೆ, ಘಟನಾ ಸ್ಥಳಕ್ಕೆ ತಮ್ಮ ತಂಡದೊಂದಿಗೆ ಆಗಮಿಸಿ, ನವಿಲು ಬಿದ್ದಿದ್ದ ಬಾವಿಗೆ ಇಳಿದು ಅಗ್ನಿಶಾಮಕ ದಳದೊಂದಿಗೆ ಕಾರ್ಯಾಚರಣೆಗೆ ಹೆಗಲು ನೀಡಿದ್ದಾರೆ. ಶೌರ್ಯದ ಸದಸ್ಯರಾದ ಮೋಹನ, ಅಶೋಕ, ವಿನೋದ್, ಜಯಚಂದ್ರ ಕುಲಾಲ್, ಸತೀಶ, ಶಶಿಧರ, ಸರಿತಾ ಸಹಕರಿಸಿದ್ದರು.
ಅಗ್ನಿಶಾಮಕ ದಳದ ಸೀನಿಯರ್ ಆಫೀಸರ್ ವಿಜೇಶ್ ವಿ.ವಿ ನೇತೃತ್ವದ ತಂಡದಲ್ಲಿ ಅತುಲ್, ರವೀಂದ್ರನ್, ಮಹೇಶ್ ವಿ.ವಿ, ಹೋಂಗಾರ್ಡ್ ಶ್ರೀನಿತ್ ಕುಮಾರ್, ಚಾಲಕ ರಂಜಿತ್ ಮೊದಲಾದವರಿದ್ದರು.