

ಬೆಂಗಳೂರು: 'ಸಜ್ಜನರು ಮಾಡಬೇಕಾದ್ದು ಇಷ್ಟೇ.. ಸಮಯೋಚಿತ ಸಹಾಯ'. ಇಂಥದ್ದೊಂದು ಸಹಾಯವನ್ನು ಪೊಲೀಸ್ ಕಮಿಷನರ್ವೊಬ್ಬರು ಮಾಡಿದ್ದು ಅಕ್ಷರಶಃ ಸಜ್ಜನರೆನಿಸಿಕೊಂಡಿದ್ದಾರೆ.
ಹೀಗೆ ಸಜ್ಜನರೆನಿಸಿಕೊಂಡವರ ಹೆಸರೂ ಸಜ್ಜನರ್ ಎಂತಲೇ. ಹೌದು.. ಸೈಬರಾಬಾದ್ನ ಪೊಲೀಸ್ ಕಮಿಷನರ್ ವಿ.ಸಿ.ಸಜ್ಜನರ್ ಅವರ ಈ ಕೆಲಸ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ. ಸೆ. 16ರ ರಾತ್ರಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿರುವ ಸಾಮಾಜಿಕ ಕಾರ್ಯಕರ್ತೆ ಸುನೀತಾ ಕೃಷ್ಣನ್ ಎಂಬುವವರು ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
"ರಾತ್ರಿ ಬಾಂಗ್ಲಾದ ಹುಡುಗಿಯೊಬ್ಬಳನ್ನು ಹೈದರಾಬಾದ್ಗೆ ಮಾನವ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಎಸ್ಒಎಸ್ ಕಾಲ್ ಬಂದಿತ್ತು. ಬಾಂಗ್ಲಾದಿಂದ ರಾತ್ರಿ 9.30ಕ್ಕೆ ಸರಿಯಾಗಿ ಕರೆ ಬಂದಿದ್ದು, ತಕ್ಷಣ ಸೈಬರಾಬಾದ್ನ ಪೊಲೀಸ್ ಕಮಿಷನರ್ ಸಜ್ಜನರ್ ಅವರನ್ನು ಸಂಪರ್ಕಿಸಿ, ವಿಷಯ ತಿಳಿಸಿದೆ. ಅಲ್ಲಿಂದ ಮುಂದಿನ ಮುಕ್ಕಾಲು ಗಂಟೆ ಸಮಯ ನಿಜಕ್ಕೂ ರೋಚಕವಾಗಿತ್ತು. ಕಾರ್ ಚೇಸ್, ಆಡಿಯೋ ಮೆಸೇಜ್ಗಳು, ಲೊಕೇಷನ್ ಟ್ರ್ಯಾಕಿಂಗ್ ಇತ್ಯಾದಿ ಎಲ್ಲವೂ ಆ ಸಮಯದಲ್ಲಿ ನಡೆದು ಹೋಗಿದ್ದವು. ಅವೆಲ್ಲದರ ಪ್ರತಿಫಲವಾಗಿ 10.25ಕ್ಕೆ ಆ ಹುಡುಗಿ ರಕ್ಷಿಸಲ್ಪಟ್ಟಿದ್ದಳು. ಇದು ಸಜ್ಜನರ್ ಅವರ ತಂಡದ ತಕ್ಷಣದ ಸ್ಪಂದನೆ ಹಾಗೂ ತುರ್ತು ಕಾರ್ಯಾಚರಣೆ ಇಲ್ಲದಿದ್ದರೆ ಸಾಧ್ಯವಾಗಿರುತ್ತಿರಲಿಲ್ಲ" ಎಂದಿರುವ ಸುನೀತಾ ಕೃಷ್ಣನ್ ಅವರು, ಸಜ್ಜನರ್ ಮತ್ತವರ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.