

ಮಂಗಳೂರು : ನಗರದ ಬಲ್ಮಠ ಸಮೀಪ ನಿರ್ಮಾಣ ಹಂತದ ಕಟ್ಟಡದ ಬಳಿ ಭೂ ಕುಸಿತ ಉಂಟಾಗಿ ಮಣ್ಣಿನಡಿ ಸಿಲುಕಿದ್ದ ಇಬ್ಬರು ಕಾರ್ಮಿಕರಲ್ಲಿ ಒಬ್ಬನನ್ನು ರಕ್ಷಿಸಲಾಗಿದೆ. ಬಿಹಾರ ಮೂಲದ ರಾಜ್ಕುಮಾರ್(18)ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಇನ್ನೊಬ್ಬ ಕಾರ್ಮಿಕನ ರಕ್ಷಣಾ ಕಾರ್ಯ ಮುಂದುವರಿದಿದೆ.
ಕಟ್ಟಡ ನಿರ್ಮಾಣಕ್ಕಾಗಿ ಅಡಿಪಾಯ ಹಾಗೂ ತಡೆಗೋಡೆ ನಿರ್ಮಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ನಿರ್ಮಾಣ ಕಾಮಗಾರಿಯ ಒಂದು ಭಾಗದಲ್ಲಿ ಇಬ್ಬರು ಕಾರ್ಮಿಕರು ತಳಪಾಯದ ಗೋಡೆಗೆ ವಾಟರ್ ಪ್ರೂಫಿಂಗ್ ರಾಸಾಯನಿಕ ಸಿಂಪಡಿಸುತ್ತಿದ್ದ ವೇಳೆ ಆ ಭಾಗದ ಮೇಲ್ಭಾಗದಿಂದ ಭೂ ಕುಸಿತ ಉಂಟಾಗಿ ಅಲ್ಲಿ ಕಟ್ಟಿದ್ದ ಟರ್ಪಾಲ್ ಮೇಲೆ ಬಿದ್ದು ಇಬ್ಬರೂ ಮಣ್ಣಿನಡಿ ಸಿಲುಕಿದ್ದರು. ಎನ್ಡಿಆರ್ಎಫ್, ಅಗ್ನಿ ಶಾಮಕ ದಳ ಹಾಗೂ ಪೋಲಿಸರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.