

ಲಕ್ಷ್ಮೇಶ್ವರ: ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಎಲ್ಲ 23 ವಾರ್ಡ್‌ಗಳಿಗೆ ನೀಡುವ ಬದಲು ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ತಮಗೆ ಬೇಕಾದ ವಾರ್ಡ್‌ಗಳಿಗೆ ಹಾಕಿಕೊಂಡಿದ್ದಾರೆ. ಅನುದಾನವನ್ನು ಎಲ್ಲ ವಾರ್ಡ್‌ಗಳಿಗೂ ಹಂಚಿಕೆ ಮಾಡಬೇಕು ಎಂದು ಪುರಸಭೆಯ ಬಿಜೆಪಿ ಸದಸ್ಯರು ಆಗ್ರಹಿಸಿದರು.
ಸದಸ್ಯೆ ಅಶ್ವಿನಿ ಅಂಕಲಕೋಟಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ 1 ಕೋಟಿ 93 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ, ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಏಕಾಏಕಿ ವಿಶೇಷ ಸಾಮಾನ್ಯ ಸಭೆ ನಡೆಸಿ ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರ ವಾರ್ಡ್‌ಗಳಿಗೆ ಕ್ರಿಯಾಯೋಜನೆ ತಯಾರಿಸಿ ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಸಿರುವುದು ಖಂಡನೀಯ. ಎಲ್ಲ ವಾರ್ಡ್‌ಗಳ ಜನರು ಪುರಸಭೆಗೆ ತೆರಿಗೆ ಪಾವತಿಸುವುದರಿಂದ ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸಬೇಕಾದುದು ಪ್ರಜಾಪ್ರತಿನಿಧಿಗಳ ಕರ್ತವ್ಯ. ಇತ್ತೀಚೆಗೆ ಸುರಿದ ಮಳೆಯಿಂದ ತೊಂದರೆ ಆಗಿರುವ ವಾರ್ಡ್‌ಗಳಲ್ಲಿ ಕಾಮಗಾರಿ ಕೈಗೊಳ್ಳಲು ಸದಸ್ಯರು ಸೂಚಿಸಿದರೂ ಬೇಜವಾಬ್ದಾರಿ ಹೇಳಿಕೆ ನೀಡಿ ತಾರತಮ್ಯ ಮಾಡಿರುವುದು ಕಂಡು ಬಂದಿದೆ. ಕಾರಣ ಜಿಲ್ಲಾಧಿಕಾರಿಗಳು ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಕ್ರಿಯಾಯೋಜನೆಗೆ ಅನುಮೋದನೆ ನೀಡಬಾರದು. ಅನುಮೋದನೆ ನೀಡಿದರೆ ಪುರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಗಂಗಾಧರ ಮೆಣಸಿನಕಾಯಿ ಮಾತನಾಡಿ, ಅನುದಾನವನ್ನು ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಬಳಸುವುದು ನ್ಯಾಯ. ಮತ್ತೊಮ್ಮೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಬಿಜೆಪಿ ಸದಸ್ಯರಾದ ಮಹೇಶ ಹುಲಬಜಾರ, ವಾಣಿ ಹತ್ತಿ, ಮಹಾದೇವಪ್ಪ ಅಣ್ಣಿಗೇರಿ, ಪೂರ್ಣಿಮಾ ಪಾಟೀಲ, ಕವಿತಾ ಶೆರಸೂರಿ, ಶೋಭಾ ಮೆಣಸಿನಕಾಯಿ, ಮಂಜಕ್ಕ ಗುಂಜಳ, ಪೂಜಾ ಖರಾಟೆ, ಮಂಜುನಾಥ ಹೊಗೆಸೊಪ್ಪಿನ, ರಮೇಶ ಹಾಳದೋಟದ, ರುದ್ರಪ್ಪ ಉಮಚಗಿ, ಬಸವರಾಜ ಕಲ್ಲೂರ ಇದ್ದರು.