ಮಸ್ಕತ್-ಮಂಗಳೂರು ವಿಮಾನ ಸೇವೆ ಪುನರಾರಂಭಕ್ಕೆ ಮನವಿ

Indian flights
Published on

ಕಾಸರಗೋಡು: ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆ ಕಳೆದ ಮೂರು ತಿಂಗಳಿಂದ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದ್ದು, ಅನಿವಾಸಿ ಭಾರತೀಯರಿಗೆ ಸಮಸ್ಯೆ ಎದುರಾಗಿದೆ. ವಾರಕ್ಕೆ ನಾಲ್ಕು ವಿಮಾನಗಳು ನಿಯಮಿತವಾಗಿ ನಡೆಸುತ್ತಿದ್ದ ಸೇವೆ ಏಕಾಏಕಿ ಸ್ಥಗಿತಗೊಂಡಿರುವುದರಿಂದ ಮಸ್ಕತ್‌ನಲ್ಲಿ ನೆಲೆಸಿರುವ ಕರಾವಳಿ ಪ್ರದೇಶದ ಪ್ರಯಾಣಿಕರಿಗೆ ತೀವ್ರ ತೊಂದರೆ ಎದುರಾಗಿದ್ದು, ಸರ್ಕಾರ ಮತ್ತು ವಿಮಾನಯಾನ ಇಲಾಖೆ ತಕ್ಷಣ ಸ್ಪಂದಿಸಿ, ಸೇವೆ ಪುನರಾರಂಭಿಸುವಂತೆ ಅನಿವಾಸಿ ಭಾರತೀಯರು ಮನವಿ ಮಾಡಿದ್ದಾರೆ.

ಗಲ್ಫ್‌ನ ಬಹುತೇಕ ರಾಷ್ಟ್ರಗಳಿಗೆ ನೇರ ವಿಮಾನ ಸೇವೆ ಮುಂದುವರಿದಿರುವ ಸಂದರ್ಭ ಕುವೈತ್ ದೇಶಕ್ಕೂ ನೇರ ವಿಮಾನ ಸೇವೆ ಆರಂಭಗೊಂಡಿದೆ. ಮಸ್ಕತ್‌ನಿಂದ ಮಂಗಳೂರಿಗೆ ಪ್ರಯಾಣಿಸುವವರು ಈಗ ದೆಹಲಿ, ಮುಂಬೈ ಅಥವಾ ಕೇರಳದ ಕಣ್ಣೂರು ಮೂಲಕ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದಿನ ಪೂರ್ತಿ ಪ್ರಯಾಣಿಸಿ ಮಂಗಳೂರು ತಲುಪಬೇಕಾಗಿದೆ. ಕನಿಷ್ಠ ಎರಡು ವಿಮಾನ ಸೇವೆ ಮರುಪ್ರಾರಂಭಿಸಬೇಕೆಂಬುದು ಓಮಾನ್‌ನಲ್ಲಿ ನೆಲೆಸಿರುವ ಕುಮಟಾ, ಕುಂದಾಪುರ, ಉಡುಪಿ, ಚಿಕ್ಕಮಗಳೂರು, ಮಂಗಳೂರು ಹಾಗೂ ಕಾಸರಗೋಡು ಅನಿವಾಸಿಗಳು ಒತ್ತಾಯಿಸಿದ್ದಾರೆ.

ಸಂಸದರ ಗಮನಕ್ಕೆ: ಮಸ್ಕತ್ ಮತ್ತು ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು (ಎನ್‌ಆರ್‌ಐ) ನೇರ ವಿಮಾನ ಸೇವೆಯನ್ನು ಮರುಸ್ಥಾಪಿಸಲು ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಓಮಾನ್‌ನ ಹಿರಿಯ ಸಮುದಾಯ ನಾಯಕ ಮಲ್ಲಾರ್ ಶಶಿಧರ ಶೆಟ್ಟಿ ಅವರು ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಗಮನಕ್ಕೂ ತಂದಿದ್ದಾರೆ.

ಗಡಿನಾಡ ಸಾಹಿತ್ಯ ಅಕಾಡೆಮಿ-ಓಮಾನ್, ಕೆಎಂಸಿಸಿ ಮಂಜೇಶ್ವರ ಮಂಡಲ ಅಧ್ಯಕ್ಷ ಅಬೂಬಕ್ಕರ್ ರಾಯಲ್ ಬೂಲ್ಲಾರ್, ಕರ್ನಾಟಕ ಜಾನಪದ ಪರಿಷತ್-ಓಮಾನ್ ಘಟಕ ಅಧ್ಯಕ್ಷ ಶಿವಾನಂದ ಕೋಟ್ಯಾನ್, ಮೊಗವೀರ ಮಸ್ಕತ್ ಅಧ್ಯಕ್ಷ ಪದ್ಮಾಕರ ಮೆಂಡನ್, ಮಸ್ಕತ್ ಹಿರಿಯರಾದ ಯುವರಾಜ್ ಮಸ್ಕತ್, ವಿಠಲ ಪೂಜಾರಿ, ಮತ್ತು ಮಸ್ಕತ್ ಕ್ರಿಕೆಟ್ ಹಿರಿಯ ಆಟಗಾರ ಸತೀಶ್ ಬಾರ್ಕೂರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net