ಉಪ್ಪಿನಂಗಡಿ: ಇಲ್ಲಿನ ಬೊಳ್ಳಾವು ಎಂಬಲ್ಲಿರುವ ಧರ್ಮಸ್ಥಳ ಬೀಡು ವಿದ್ಯುತ್ ಪರಿವರ್ತಕದಿಂದ ಹಾದು ಹೋಗುವ ವಿದ್ಯುತ್ ಸಂಪರ್ಕ ತಂತಿಗಳು ತೀರಾ ಹಳೆಯದಾಗಿದ್ದು, ಇದನ್ನು ಬದಲಾವಣೆ ಮಾಡಬೇಕು, ಎಚ್‌ಟಿ ಮತ್ತು ಎಲ್‌ಟಿ ಲೈನ್‌ಗೆ ತಾಗುವ ಗಿಡಗಳ ಕೊಂಬೆಗಳನ್ನು ಕತ್ತರಿಸಬೇಕು ಮತ್ತು ಇಲ್ಲಿಗೆ ಹೆಚ್ಚುವರಿ ವಿದ್ಯುತ್ ಪರಿವರ್ತಕವನ್ನು ಅಳವಡಿಸಬೇಕೆಂದು ಗ್ರಾಹಕರ ನಿಯೋಗವೊಂದು ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಅಭಿಯಂತಗೆ ಮನವಿ ನೀಡಿತು.
ಇಲ್ಲಿರುವ ವಿದ್ಯುತ್ ಪರಿವರ್ತಕ 63 ಕೆ.ವಿ.ಯದ್ದಾಗಿದ್ದು, ಇದರಿಂದ ಹಲವು ಮನೆಗಳಿಗೆ, ಕೃಷಿ ಪಂಪ್‌ಗಳಿಗೆ ಹಾಗೂ ಒಂದು ಉದ್ಯಮ ಸಂಸ್ಥೆಗೆ ಸಂಪರ್ಕ ಇದೆ. ಆದರೆ ಈ ವಿದ್ಯುತ್ ಪರಿವರ್ತಕ ಇಷ್ಟು ಧಾರಣಾ ಸಾಮರ್ಥ್ಯ ಹೊಂದಿರದಿರುವುದರಿಂದ ಇಲ್ಲಿ ಲೋ ವೋಲ್ಟೇಜ್ ಸಮಸ್ಯೆ ಮಾಮೂಲಿ. ಆದ್ದರಿಂದ ಇಲ್ಲಿಗೊಂದು ಹೆಚ್ಚುವರಿ ವಿದ್ಯುತ್ ಪರಿವರ್ತಕವನ್ನು ನೀಡಬೇಕೆಂದು ಮನವಿ ನೀಡಲಾಯಿತು.
ಮನವಿಗೆ ಸ್ಪಂದಿಸಿದ ಮೆಸ್ಕಾಂ ಉಪ್ಪಿನಂಗಡಿ ಶಾಖೆಯ ಸಹಾಯಕ ಅಭಿಯಂತ ನಿತಿನ್ ಕುಮಾರ್, ರಸ್ತೆ ವಿಸ್ತರಣೆಗೆ ತೊಡಕಾಗುತ್ತಿರುವ ವಿದ್ಯುತ್ ಕಂಬವೊಂದನ್ನು ಸ್ಥಳಾಂತರಿಸಲು ಗ್ರಾ.ಪಂ. ಸದಸ್ಯರೋರ್ವರು ಈ ಹಿಂದೆಯೇ ಮನವಿ ಮಾಡಿದ್ದಾರೆ. ವಿದ್ಯುತ್ ತಂತಿಗಳ ಬದಲಾವಣೆ ಮತ್ತು ಹೆಚ್ಚುವರಿ ವಿದ್ಯುತ್ ಪರಿವರ್ತಕದ ಬೇಡಿಕೆಯ ಬಗ್ಗೆ ಅಂದಾಜು ಪಟ್ಟಿ ಸಿದ್ಧಗೊಳಿಸಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು. ನಿತಿನ್ ಬೊಳ್ಳಾವು, ಬಾಬು ಗೌಡ ಬೊಳ್ಳಾವು ಮತ್ತು ಸುಚಿತ್ ಬೊಳ್ಳಾವು ಉಪಸ್ಥಿತರಿದ್ದರು.