ಅಮೆರಿಕಕ್ಕೆ ಪಶ್ಚಾತ್ತಾಪ: ವಿದೇಶಗಳಲ್ಲಿ ಕರೊನಾ ಕನ್ನಡಿಗರ ವರದಿ

America Kannadiga
Published on

ಬೆಂಗಳೂರು: ಅಮೆರಿಕ, ಸ್ವೀಡನ್​ನಲ್ಲಿ ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ಕರೊನಾ ಪ್ರಕರಣಗಳು ಈಗ ಅಂಕೆಗೆ ಸಿಗದಷ್ಟು ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಚೀನಾದಲ್ಲಿ ಸೋಂಕು ಕಾಣಿಸಿಕೊಂಡ ಬಳಿಕವೂ ಈ ಎರಡು ದೇಶಗಳು ಎಚ್ಚೆತ್ತುಕೊಳ್ಳದಿರುವುದೇ ಇಂದಿನ ಸ್ಥಿತಿಗೆ ಕಾರಣ ಎಂಬುದು ಸ್ಥಳೀಯರ ಆರೋಪ. ಅಮೆರಿಕದ ಉದ್ಯಮಿ, ಕನ್ನಡಿಗ ಕರ್ನಲ್ ನಟರಾಜ್ ವಿ.ಕೋಟೆ ಹಾಗೂ ಸ್ವೀಡನ್​ನ ವೋಲ್ವೋ ಉದ್ಯೋಗಿ ಅರುಣ್ ಉಚೀಲಾ ತಮ್ಮ ಕಾರ್ಯಕ್ಷೇತ್ರದಿಂದಲೇ ವಿಜಯವಾಣಿಗಾಗಿ ಈ ಪ್ರತ್ಯಕ್ಷ ವರದಿ ನೀಡಿದ್ದಾರೆ.

ಕರೊನಾ ಬಗ್ಗೆ ಆರಂಭದಲ್ಲೇ ನಿರ್ಲಕ್ಷ್ಯ ತೋರಿದ್ದು ಅಮೆರಿಕದ ಇಂದಿನ ಸ್ಥಿತಿಗೆ ಕಾರಣ ಎಂಬುದು ಕರ್ನಲ್ ನಟರಾಜ್ ಆರೋಪ. ವೈರಸ್ ಕಾಣಿಸಿಕೊಂಡ ಕೂಡಲೇ ಟ್ರಂಪ್ ಸರ್ಕಾರ ಕೆಲ ಕಠಿಣ ಕ್ರಮಕೈಗೊಂಡಿದ್ದರೆ ಇಷ್ಟೊಂದು ಜನರಿಗೆ ವೈರಸ್ ಹರಡುತ್ತಿರಲಿಲ್ಲ. ಅಮೆರಿಕದಲ್ಲಿ ಮೇಡ್ ಇನ್ ಚೀನಾ ವಸ್ತುಗಳನ್ನು ಯಥೇಚ್ಛವಾಗಿ ಬಳಲಾಗುತ್ತಿತ್ತು. ಏಕಾಏಕಿ ಈ ವಸ್ತುಗಳನ್ನು ಸ್ಥಗಿತಗೊಳಿಸಿದ್ದರಿಂದಲೇ ವೈರಸ್​ನ ಬಗ್ಗೆ ಗೊತ್ತಾಯಿತು. ನ್ಯೂಯಾರ್ಕ್ ಮತ್ತಿತರ ರಾಜ್ಯಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ಚಿಂತಿಸಿದೆ. ಭಾರತದ ಮಾದರಿಯಲ್ಲಿ ಲಾಕ್​ಡೌನ್ ಘೋಷಿಸಿಲ್ಲ. ಸ್ಯಾನಿಟೈಸರ್ ಕೊರತೆ ಎದುರಾಗಿದೆ. ಕೆಲ ಅಗತ್ಯ ವಸ್ತುಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಕರೊನಾ ತಡೆಯಲು 2 ಟ್ರಿಲಿಯನ್ ಡಾಲರ್ ಅನುದಾನ ಘೋಷಿಸಿದೆ. ಅಲ್ಲದೆ, ಇತರೆ ದೇಶಕ್ಕೂ ಅನುದಾನ ನೀಡಲಾಗುತ್ತಿದೆ ಎನ್ನುತ್ತಾರೆ ನಟರಾಜ್.

ಇನ್ನು ಸ್ವೀಡನ್​ನಲ್ಲೂ ಬಹುತೇಕ ಇದೇ ಪರಿಸ್ಥಿತಿ ಇದೆ. ಇಲ್ಲಿನ ಸರ್ಕಾರ ಇನ್ನೂ ಲಾಕ್​ಡೌನ್ ಮಾಡಿಲ್ಲ. ಆದರೆ, ಕೆಲ ಕಠಿಣ ಕ್ರಮ ಕೈಗೊಂಡಿದೆ. ದೇಶದ ಗಡಿ, ಕಾಲೇಜು ಹಾಗೂ ಕಚೇರಿ ಮುಚ್ಚಲಾಗಿದೆ. ಕೆಲ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ತರಗತಿ ನಡೆಯುತ್ತಿವೆ. ಸ್ವೀಡನ್​ನಲ್ಲಿ ಆಂದಾಜು ಒಂದು ಸಾವಿರ ಕನ್ನಡಿಗರು ಇದ್ದಾರೆ. ನಾನು ಇರುವ ಜಾಗದಲ್ಲಿ 10 ಜನ ಇರಬಹುದು ಎಂದು ವೋಲ್ವೋ ಉದ್ಯೋಗಿ ಕನ್ನಡಿಗ ಅರುಣ್ ಉಚೀಲಾ ತಿಳಿಸಿದ್ದಾರೆ.

ಸ್ವೀಡನ್​ನಲ್ಲಿ ದಿನಕ್ಕೆ ಸರಾಸರಿ 200 ಪ್ರಕರಣಗಳು ದಾಖಲಾಗುತ್ತಿವೆ. ಅಂದಾಜು 10 ದಶಲಕ್ಷ ಜನಸಂಖ್ಯೆ ಹೊಂದಿರುವ ಈ ಚಿಕ್ಕ ದೇಶದ ಜನರಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ, ಎಲ್ಲ ಸ್ಥಳಗಳು ಸ್ವಚ್ಛಗೊಂಡಿವೆ. ಸರ್ಕಾರ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಿದೆ. ಇಡೀ ಯುರೋಪ್ ವ್ಯಾಪ್ತಿಯ ರಾಷ್ಟ್ರಗಳು ಭಯಭೀತವಾಗಿದ್ದು, ಕರೊನಾ ನಿಯಂತ್ರಣಕ್ಕೆ ಬರದಿದ್ದರೆ ಸ್ವೀಡನ್ ಲಾಕ್​ಡೌನ್ ಘೋಷಿಸುವ ಸಾಧ್ಯತೆ ಹೆಚ್ಚಿದೆ. ಭಾರತದ ಜನರಿಗೆ ಕರೊನಾ ವೈರಸ್ ತಡೆಯಲು ಮನೆಯಲ್ಲಿ ಇರುವುದೇ ಏಕೈಕ ಮಾರ್ಗ ಎಂಬುದು ಅರುಣ್ ಸಲಹೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net