ಉಳ್ಳಾಲ ನೇತ್ರಾವತಿ ಸೇತುವೆ ದುರಸ್ತಿ

Ull_Bridge
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಬುಧವಾರ ದುರಸ್ತಿ ಕೆಲಸ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ವಾಹನ ಸವಾರರು ಮಂಗಳೂರು ತಲುಪಲು ಪರದಾಟ ನಡೆಸಿದರು.

ತೊಕ್ಕೊಟ್ಟಿನಿಂದ ಮಂಗಳೂರು ಸಂಪರ್ಕಿಸುವ ಕಲ್ಲಾಪು ಕುದ್ರುವಿನಲ್ಲಿ ಸಿಗುವ ನೇತ್ರಾವತಿ ಸೇತುವೆಯಲ್ಲಿ ಕಳೆದ ಹಲವು ಸಮಯಗಳಿಂದ ಹೊಂಡಗಳು ಕಾಣಿಸಿಕೊಳ್ಳುತ್ತಿವೆ. ಕೆಲವು ಕಡೆಗಳಲ್ಲಿ ದೊಡ್ಡ ಹೊಂಡಗಳಿದ್ದರೆ, ಹಲವೆಡೆ ಕಾಂಕ್ರೀಟ್ ಕಾಮಗಾರಿ ಸಂದರ್ಭ ಹಾಕಲಾಗುವ ಕಬ್ಬಿಣದ ರಾಡ್, ಚಲನ್ ಕೂಡ ಕಾಣಿಸಿಕೊಳ್ಳುವಷ್ಟರ ಮಟ್ಟಿಗೆ ಹೊಂಡಗಳಿದ್ದವು. ದ್ವಿಚಕ್ರ ವಾಹನ ಸವಾರರ ಪಾಲಿಗೆ ಈ ಹೊಂಡಗಳು ಮರಣ ಮೃದಂಗ ಬಾರಿಸುತ್ತಿದ್ದವು.

ಕಳೆದ ಶನಿವಾರ ಇಲ್ಲಿಂದ ಕಾರೊಂದು ಸಂಚರಿಸುತ್ತಿದ್ದಾಗ ಹೊಂಡಕ್ಕಿಳಿದ ಪರಿಣಾಮ ಎರಡೂ ಚಕ್ರಗಳು ಸ್ಫೋಟಗೊಂಡಿದ್ದವು. ಈ ಘಟನೆಯಿಂದ ಬೇಸತ್ತ ಕಾರಿನ ಪ್ರಯಾಣಿಕರೊಬ್ಬರು ಹೊಂಡ, ಕಾರಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹೊಂಡಗಳಿಂದ ತಮಗೆದುರಾದ ಅಪಾಯದ ಬಗ್ಗೆ ಧ್ವನಿ ಸಂದೇಶದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ ಇಲಾಖೆ ಅಧಿಕಾರಿಗಳನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಇದರ ಬೆನ್ನಲ್ಲೇ ಅಧಿಕಾರಿಗಳು ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ನಡೆಸಿದ್ದರು.

ಮುಂದುವರಿದ ಭಾಗವಾಗಿ ಬುಧವಾರ ಸೇತುವೆ ಮಧ್ಯಭಾಗದಲ್ಲಿ ದುರಸ್ತಿ ಕೆಲಸ ನಡೆಸಲಾಗಿದೆ. ಇದಕ್ಕಾಗಿ ಕೆಲಸ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್ ಇಟ್ಟು ರಸ್ತೆ ಮುಚ್ಚಲಾಗಿತ್ತು. ಇದರ ಪರಿಣಾಮ ತೊಕ್ಕೊಟ್ಟಿನಿಂದ ಸೇತುವೆವರೆಗೂ ವಾಹನಗಳ ಸರತಿ ಸಾಲು ಕಂಡು ಬಂದಿದ್ದು, ಕೇವಲ ಎರಡು ಕಿ.ಮೀ. ಪ್ರಯಾಣಕ್ಕೆ ಒಂದು ತಾಸು ವ್ಯಯಿಸಬೇಕಾದ ಪರಿಸ್ಥಿತಿ ಬಂದು ವಾಹನ ಸವಾರರು, ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾದರು.

ಸಾರ್ವಜನಿಕರಿಂದ ಆಕ್ರೋಶ

ಹೆದ್ದಾರಿ ಕೆಲಸ ನಡೆಸುವ ಸಂದರ್ಭ ವಾಹನಗಳಿಗೆ ತೊಂದರೆಯಾಗಬಾರದು ಎನ್ನುವ ನಿಯಮ ಇದ್ದರೂ ಇಲ್ಲಿ ನಿಯಮ ಮೀರಿ ಕೆಲಸ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಉಡುಪಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ರಾತ್ರಿಯಿಂದ ಬೆಳಗ್ಗೆವರೆಗೆ ಮಾತ್ರ ನಡೆಸಲಾಗುತ್ತಿದ್ದರೆ, ರಾ.ಹೆ.66ರ ತೇಪೆ ಕೆಲಸ ಹಗಲಲ್ಲೇ ಮಾಡಿ ಜನರಿಗೆ ತೊಂದರೆ ನೀಡಲಾಗುತ್ತಿದೆ ಎನ್ನುವ ಅಸಮಾಧಾನ ಸಾರ್ವಜನಿಕವಾಗಿ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net