

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ನಟ ದರ್ಶನ್ ಆಪ್ತೆ ಪವಿತ್ರಾ ಗೌಡ ಹಾಗೂ ಎ7 ಆರೋಪಿ ಅನ್ಬುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇಂದು (ಶನಿವಾರ) ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆದಿದ್ದು, ವಿಚಾರಣೆ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯ ತಿರಸ್ಕೃತಗೊಳಿಸಿ ಆದೇಶ ಮಾಡಿದ್ದಾರೆ. ಈ ಮೂಲಕ ಜಾಮೀನು ಸಿಗಬಹುದು ಎಂಬ ಆಸೆಯಲ್ಲಿದ್ದ ಪವಿತ್ರಾ ಗೌಡಗೆ ನಿರಾಸೆಯಾಗಿದೆ.
ನ್ಯಾಯಾಂಗ ಬಂಧನ ಸೆಪ್ಟೆಂಬರ್ 9ವರೆಗೂ ವಿಸ್ತರಣೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ಸೆಪ್ಟೆಂಬರ್ 9ವರೆಗೂ ವಿಸ್ತರಿಸಿತು. ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮಂಗಳವಾರಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿಅವರೆಲ್ಲರನ್ನೂ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು.