ಅಪಾಯಕಾರಿ ಮರ, ಗೆಲ್ಲುಗಳ ತೆರವು

New Project (24)
Published on

ಉಪ್ಪಿನಂಗಡಿ: ಮಳೆಗಾಲದಲ್ಲಿ ಜೀವಹಾನಿಗೆ ಕಾರಣವಾಗಬಹುದಾದ ಅಪಾಯಕಾರಿ ಮರಗಳ ತೆರವಿಗೆ ಪುತ್ತೂರು ಶಾಸಕರು ನೀಡಿದ ನಿರ್ದೇಶನಕ್ಕೆ ಸ್ಪಂದನೆ ತೋರಿದ ಅರಣ್ಯ ಇಲಾಖೆ, ಬಿರುಸಿನ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಮರ ಮತ್ತು ಗೆಲ್ಲುಗಳನ್ನು ಕಡಿಯಲು ಮುಂದಾಗಿದೆ.

ಬುಧವಾರ ನಡೆದಿದ್ದ ನೆರೆ ಮುಂಜಾಗ್ರತಾ ಸಭೆಯಲ್ಲಿ ಅಪಾಯಕಾರಿ ಮರಗಳ ಬಗ್ಗೆ ವ್ಯಕ್ತಗೊಂಡ ಕಳವಳ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಜರುಗಿಸಿ ವರದಿ ಒಪ್ಪಿಸುವಂತೆ ಶಾಸಕರು ಹಾಗೂ ಸಹಾಯಕ ಕಮಿಷನರ್ ಅರಣ್ಯ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅದರಂತೆ ಇಲ್ಲಿನ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹಾಗೂ ಪ್ರೊಬೇಷನರಿ ಸಹಾಯಕ ಸಂರಕ್ಷಣಾಧಿಕಾರಿ ಹಸ್ತ ಕಾರ್ಯಪ್ರವೃತ್ತರಾಗಿದ್ದು, ಅರಣ್ಯ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ಹಿರೇಬಂಡಾಡಿ- ಕೊಲ ಸಂಪರ್ಕ ರಸ್ತೆಯ ರಾಮನಗರ ಪರಿಸರದಲ್ಲಿ ಮರ ತೆರವು ಆರಂಭಿಸಿದ್ದಾರೆ. ಈ ವ್ಯಾಪ್ತಿಯ ಯಾವುದೇ ರಸ್ತೆಯಲ್ಲಿ ಅಪಾಯಕಾರಿ ಮರಗಳು ಮತ್ತು ಗೆಲ್ಲುಗಳಿದ್ದರೆ ಅವೆಲ್ಲವನ್ನೂ ಕಡಿಯಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ಅರಣ್ಯಾಧಿಕಾರಿ ಭವಾನಿ ಶಂಕರ, ಅರಣ್ಯ ಗಸ್ತು ರಕ್ಷಕ ಉದಯ ಚಂದ್ರ, ದಿವಾಕರ ರೈ, ಅರಣ್ಯ ಪಾಲಕ ದಿನೇಶ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net