ಕಾಶ್ಮೀರದಲ್ಲಿ ರೆಮೋ: ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಅಂತ್ಯ

remo
Published on

ಬೆಂಗಳೂರು: ಒಂದು ಕಡೆ ಜನತಾ ಕರ್ಫ್ಯೂ ಮತ್ತು ಲಾಕ್​ಡೌನ್​ನಿಂದ ಹಲವು ಚಿತ್ರತಂಡಗಳು ಚಿತ್ರೀಕರಣ ನಿಲ್ಲಿಸಿದರೆ, ಇನ್ನೊಂದು ಕಡೆ ‘ರೆಮೋ’ ಚಿತ್ರತಂಡ ಕಾಶ್ಮೀರದಲ್ಲಿ ಹಾಡಿನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿತ್ತು. ಈಗ ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕುಂಬಳಕಾಯಿ ಒಡೆದಿದೆ.

ಪವನ್ ಒಡೆಯರ್ ನಿರ್ದೇಶನದ ‘ರೆಮೋ’ ಚಿತ್ರದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಆ ಹಾಡಿನ ಚಿತ್ರೀಕರಣಕ್ಕೆ ಕಳೆದ ವಾರ ಚಿತ್ರತಂಡವು ಕಾಶ್ಮೀರಕ್ಕೆ ಹೋಗಿತ್ತು. ಪವನ್ ಒಡೆಯರ್, ಇಶಾನ್, ಆಶಿಕಾ ರಂಗನಾಥ್ ಸೇರಿದಂತೆ 30 ಜನರ ಚಿತ್ರತಂಡ, ಸೋನ್​ವಾರ್ಗ್ ಮುಂತಾದ ಕಡೆ ಚಿತ್ರೀಕರಣ ಮುಗಿಸಿದೆ.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಪವನ್, ‘ಮೂರು ದಿನಗಳ ಕಾಲ ಚಿತ್ರೀಕರಣ ಮುಗಿಸಿದ್ದೇವೆ. ಆಗಷ್ಟೇ ಫ್ರೆಶ್ ಆಗಿ ಸ್ನೋಫಾಲ್ ಆಗಿತ್ತು. ಇಂಥ ಸುಂದರ ಪರಿಸರದಲ್ಲಿ ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ನಾಯಕ ಮತ್ತು ನಾಯಕಿಯ ದೃಷ್ಟಿಕೋನದಲ್ಲಿ ಈ ಹಾಡು ಸಾಗುತ್ತದೆ. ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ‘ನಿನ್ನದೆ ನಿನ್ನದೆ ಆಲೋಚನೆ ಈಗ ನನಗೆ ...’ ಎಂದು ಸಾಗುವ ಈ ಹಾಡನ್ನು ನಾನೇ ಬರೆದಿದ್ದೇನೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಈ ಹಾಡಿನ ಮೂಲಕ ಇಡೀ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಸಹ ಮುಗಿಯುವ ಹಂತಕ್ಕೆ ಬಂದಿವೆಯಂತೆ. ಗ್ರಾಫಿಕ್ಸ್ ಕೆಲಸ ಸ್ವಲ್ಪ ಬಾಕಿ ಇದ್ದು, ಇನ್ನೆರೆಡು ತಿಂಗಳಲ್ಲಿ ಚಿತ್ರದ ಕೆಲಸಗಳೆಲ್ಲವನ್ನೂ ಮುಗಿಸಿ, ಆಗಸ್ಟ್​ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ ಎನ್ನುತ್ತಾರೆ ಪವನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net