

ವಿಜಯಪುರ : ಸ್ವಾತಂತ್ರ್ಯ ಭಾರತದ ಅವಿಸ್ಮರಣೀಯ ಕಾರ್ಗಿಲ್ ಯುದ್ಧದ 23ನೇ ವಿಜಯ ದಿನವನ್ನು ವಿಜಯವಾಣಿ-ದಿಗ್ವಿಜಯ ವಾಹಿನಿ ಹಾಗೂ ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘದಿಂದ ಸಂಭ್ರಮ, ಸಡಗರ ಮತ್ತು ಅಭಿಮಾನದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದ 23ನೇ ವರ್ಷದ ಸಂಭ್ರಮಾಚರಣೆ ದೇಶ ಪ್ರೇಮ ಇಮ್ಮಡಿಗೊಳಿಸಿತು. ಕಾರ್ಗಿಲ್ ಯುದ್ಧ ಸನ್ನಿವೇಶವನ್ನು ಅನಾವರಣಗೊಳಿಸಿತು.
ಮುಖ್ಯ ಅತಿಥಿ ಶಾಸಕ ಡಾ. ಎಂ.ಬಿ. ಪಾಟೀಲ ಮಾತನಾಡಿ, ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. 1999 ಜುಲೈ 26ರಂದು ಕಾರ್ಗಿಲ್ ಯುದ್ಧವನ್ನು ನಾವು ಜಯಿಸಿದೆವು. ಅದರ ಸವಿ ನೆನಪಿಗಾಗಿ ನಾವಿಂದು ವಿಜಯೋತ್ಸವ ಆಚರಿಸುತ್ತಿದ್ದೇವೆ. ಕಾರ್ಗಿಲ್ ಯುದ್ಧ ಕೇವಲ ಒಂದು ದಿನದ್ದಾಗಿರಲಿಲ್ಲ. ಸುದೀರ್ಘ ಯುದ್ಧದಲ್ಲಿ ಅನೇಕರು ಹುತಾತ್ಮರಾದರು. ಅವರನ್ನು ನಾವೆಲ್ಲರೂ ಸ್ಮರಿಸೋಣ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಹಿರಿಯರು ಬ್ರಿಟಿಷರ ವಿರುದ್ಧ ಹೋರಾಡಿ, ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು. ಅವರ ತ್ಯಾಗದ ಫಲದಿಂದ ನಾವೆಲ್ಲ ಇಂದು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ. ಆದರೆ, ದೇಶದ ಸೈನಿಕರಿಗೆ ನಾವು ಏನು ಕೊಟ್ಟಿದ್ದೇವೆ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಕಾಶ್ಮೀರದ ಗಡಿಯಲ್ಲಿ, ಕೊರೆಯುವ ಚಳಿಯಲ್ಲಿ, ಗುಡ್ಡಗಾಡುಗಳಲ್ಲಿ ಪ್ರಾಣ ಒತ್ತೆ ಇಟ್ಟು ನಮ್ಮ ಸೈನಿಕರು ಹೋರಾಡುತ್ತಿದ್ದಾರೆ. ಅವರ ಸೇವೆಗೆ ಪ್ರತಿಯಾಗಿ ನಾವೇನು ಮಾಡುತ್ತಿದ್ದೇವೆ? ಎಂಬುದನ್ನು ಕೇಳಿಕೊಳ್ಳಬೇಕಿದೆ. ದೇಶಕ್ಕಾಗಿ ಹುತಾತ್ಮಗೊಂಡ ಯೋಧರ ಕುಟುಂಬಕ್ಕೆ ನೆರವಾಗಬೇಕು. ಅವರನ್ನು ಗೌರವಿಸಬೇಕು ಎಂದರು.
ಹುತಾತ್ಮ ಯೋಧರ ಕುಟುಂಬಗಳಿಗೆ ಸೂಕ್ತ ಸೌಲಭ್ಯ ಕೊಡಬೇಕು. ಇದು ನಮ್ಮೆಲ್ಲರ ಕರ್ತವ್ಯ. ಇದು ಉಪಕಾರ ಅಲ್ಲ. ಸೈನಿಕರಿಗೆ ವೈದ್ಯರು, ಇಂಜಿನಿಯರ್‌ಗಳಿಗಿಂತ ಹೆಚ್ಚಿನ ಸಂಬಳ ಸಿಗಬೇಕು. ನಿವೃತ್ತಿ ಬಳಿಕ ಸೌಲಭ್ಯಗಳು ಸಿಗಬೇಕು ಎಂದರು.
ಸಿಎ ಸೈಟ್ ಕೊಡಿಸುವ ಭರವಸೆ : ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಸ್ಥೆಗೆ ಸಿಎ ಸೈಟ್ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಅದಕ್ಕಾಗಿ ಮಾಜಿ ಸೈನಿಕರು ಕಟ್ಟಿದ ಬಡ್ಡಿ ಹಣ ಸಹ ವಾಪಸ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಮುಖ್ಯಮಂತ್ರಿ ಬಳಿ ನಾನೇ ಹೋಗಿ ಸೈನಿಕರಿಗೆ ಸೈಟ್ ಕೊಡಿಸುವ ಹಾಗೂ ಬಡ್ಡಿ ಹಣ ವಾಪಸ್ ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ ಸಂಘದ ಭವನ ಕಟ್ಟಲು, ಅಲ್ಲಿ ಚಟುವಟಿಕೆ ನಡೆಯಲು ವೈಯಕ್ತಿಕವಾಗಿ ಮಾತ್ರವಲ್ಲದೇ, ಶಾಸಕನಾಗಿ ಹಾಗೂ ಬಿಎಲ್‌ಡಿಇ ಸಂಸ್ಥೆಯಿಂದ ಸಾಧ್ಯವಾದಷ್ಟು ನೆರವು ನೀಡುವುದಾಗಿ ಭರವಸೆ ನೀಡಿದರು.
ಸೈನ್ಯಕ್ಕೆ ಸೇರಲು ಪ್ರೇರಣೆ ಸಿಗಲಿ : ಸೈನ್ಯಕ್ಕೆ ಹೋಗಲು ಯಾರೂ ಬಯಸಲ್ಲ. ಯುರೋಪಿಯನ್ ರಾಷ್ಟ್ರಗಳಲ್ಲಿ ಕಡ್ಡಾಯ ಸೈನಿಕ ಸೇವೆ ಇದೆ. ಆದರೆ ಭಾರತದಲ್ಲಿ ಶ್ರೀಮಂತರ ಮಕ್ಕಳು ಸೈನ್ಯಕ್ಕೆ ಸೇರಲ್ಲ. ಬಡವರ ಮಕ್ಕಳೇ ಹೆಚ್ಚಾಗಿ ಸೈನ್ಯ ಸೇರುತ್ತಾರೆ. ಒಂದೆಡೆ ರಾಷ್ಟ್ರ ಪ್ರೇಮ ಇನ್ನೊಂದೆಡೆ ಬಡತನ ಸೇನೆಗೆ ಪ್ರೇರೇಪಿಸುತ್ತದೆ. ಇದರ ಜೊತೆಗೆ ಶ್ರೀಮಂತರ ಮಕ್ಕಳೂ ಸೇನೆಗೆ ಸೇರುವಂತಾಗಬೇಕೆಂದರು.
ವಿಜಯವಾಣಿ ಸ್ಥಾನಿಕ ಸಂಪಾದಕರಾದ ಕೆ.ಎನ್. ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಅ.ರಾ. ಹಿರೇಮಠ ಮಾತನಾಡಿ, ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘದ ಕಾರ್ಯವೈಖರಿ ಹಾಗೂ ಮಾಜಿ ಸೈನಿಕರ ಸಮಸ್ಯೆ ಕುರಿತು ಸವಿವರವಾಗಿ ವಿವರಿಸಿದರು. ಅಲ್ಲದೇ, ದೇಶಕ್ಕೆ ತ್ಯಾಗ, ಬಲಿದಾನಗೈದ ಸೈನಿಕರ ಸಂಘಕ್ಕೆ ಈವರೆಗೂ ಒಂದೇ ಒಂದು ಸಮುದಾಯ ಭವನ ಇಲ್ಲ. ಇರುವ ಸಿಎ ಸೈಟ್‌ಗೂ ಬಡ್ಡಿ ಕಟ್ಟಲಾಗುತ್ತಿದೆ. ಹೀಗಾಗಿ ಶಾಸಕ ಎಂ.ಬಿ. ಪಾಟೀಲರು ಈ ಸಮಸ್ಯೆ ಬಗೆ ಹರಿಸಬೇಕೆಂದು ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಡಿವೈಎಸ್‌ಪಿ ಸಿದ್ಧೇಶ್ವರ, ಕಮಾಂಡರ್ ಸೂರ್ಚಿ ಗೌರ್, ನಿವೃತ್ತ ಕರ್ನಲ್ ಬಿ.ಎಸ್. ಹಿಪ್ಪರಗಿ, ವಿವೇಕಾನಂದ ಹೂವಿನಹಳ್ಳಿ, ಎಚ್.ಆರ್. ಮಾಚಪ್ಪನವರ, ಎಸ್.ಎಸ್. ಶೇಗುಣಸಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಬಾಬುರಾವ ತರಸೆ ಮತ್ತಿತರರು ಇದ್ದರು.
ವಿದ್ಯಾಧರ ಪಾಟೀಲ ಕಾರ್ಗಿಲ್ ಯುದ್ಧದ ಚಿತ್ರಣ ಕಟ್ಟಿಕೊಟ್ಟರು. ಗಾಯಕಿ ಮಂಜುಳಾ ಹಿಪ್ಪರಗಿ ದೇಶಭಕ್ತಿಗೀತೆ ಪ್ರಸ್ತುತ ಪಡಿಸಿದರು. ನಿವೃತ್ತ ಕ್ಯಾಪ್ಟನ್ ಸಂಗಪ್ಪ ದೇಗಿನಾಳ ಧ್ವಜ ವಂದನೆ ನೆರವೇರಿಸಿದರು.
ಹುತಾತ್ಮ ಯೋಧರ ಕುಟುಂಬದವರಿಗೆ ಸನ್ಮಾನ : ಹುತಾತ್ಮ ಯೋಧ ಕಾಶಿರಾಯ ಬೊಮ್ಮನಹಳ್ಳಿ, ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ಹುತಾತ್ಮ ಯೋಧ ಸಹದೇವ ಮೋರೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಹುತಾತ್ಮ ಯೋಧ ಸಂಗನಗೌಡ ಪಾಟೀಲ ಇವರ ಕುಟುಂಬಸ್ಥರನ್ನು ಗೌರವಿಸಲಾಯಿತು. ಸಾಧಕ ಸಂತೋಷ ಬಬಲೇಶ್ವರ ಇವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.