ಎಂಟು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಕರೊನಾ ಡ್ರಗ್!

Remdisviw.jpg
Published on

ಮುಂಬೈ: ಕೋವಿಡ್ 19 ಕಾಯಿಲೆಗೆ ಪರಿಣಾಮಕಾರಿ ಔಷಧಿ ಎಂದು ಸಾಬೀತಾದ ರೆಮ್ಡಿಸಿವಿರ್ ಔಷಧಿಯ ಕಾಳ ವ್ಯಾಪಾರೋದ್ಯಮದಲ್ಲಿ ಭಾಗಿಯಾಗಿದ್ದ ಒಂದು ತಂಡದ ವಿರುದ್ಧ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಸೂಕ್ತ ಕ್ರಮ ಕೈಗೊಂಡಿದೆ.
ಈ ದಂಧೆಯಲ್ಲಿ ಭಾಗಿಯಾಗಿದ್ದ ಒಟ್ಟು 07 ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರ ಸಹಾಯದಿಂದ ಎಫ್​ಡಿಎ ಜುಲೈ 18 ರಿಂದ ಈ ಕಾರ್ಯಾಚರಣೆಯನ್ನು ಆರಂಭಿಸಿದ್ದು,ಇದು ಇಂದು ಬೆಳಗಿನ ವರೆಗೂ ಮುಂದುವರೆದಿತ್ತು.  

ರೆಮ್ಡಿಸಿವಿರ್ ಔಷಧಿಯ ಕಪ್ಪು ಮಾರಾಟದ ಬಗ್ಗೆ ಎಫ್ಡಿಎಗೆ ಜುಲೈ 17 ರಂದು ಒಂದು ಸುಳಿವು ಸಿಕ್ಕಿತು. ಅದನ್ನು ಆಧರಿಸಿ ಎಫ್‌ಡಿಎ ಆರೋಪಿಗಳಲ್ಲಿ ಒಬ್ಬನನ್ನು ಪತ್ತೆ ಹಚ್ಚಿದೆ.
ಆರೋಪಿಗಳು ಕಳೆದ ರಾತ್ರಿ ಎಫ್‌ಡಿಎ ಅಧಿಕಾರಿಗಳನ್ನು (ಗ್ರಾಹಕರಂತೆ ಕಂಡುಬಂದಿದ್ದ) ಮುಲುಂದ್​​​ಗೆ ಕರೆದರು. ಮೂವರು ಎಫ್‌ಡಿಎ ಅಧಿಕಾರಿಗಳು ಗ್ರಾಹಕರಂತೆ ಮುಲುಂದ್​ಗೆ ಹೋದರು. ಇಬ್ಬರು ಆರೋಪಿಗಳು ರೆಮ್ಡಿಸಿವಿರ್ ನ ಒಂದು ಬಾಟಲಿ ತೆಗೆದುಕೊಂಡು ಬಂದು ಅದರ ಬೆಲೆ 30,000 ರೂ.ಎಂದು ಹೇಳಿದರು.
ವಾಸ್ತವವಾಗಿ ರೆಮ್ಡಿಸಿವಿರ್‌ ಔಷಧಿಯ ಹೆಟ್ರೊ ಕಂಪನಿಯ ಎಂಆರ್‌ಪಿ 5400 ರೂ. ಮತ್ತು ಸಿಪ್ಲಾ‘ ಕಂಪನಿಯ ಬೆಲೆ 4,000 ರೂ.ಇದೆ.  

ಈ ಇಬ್ಬರು ಆರೋಪಿಗಳನ್ನು ಎಫ್‌ಡಿಎ ಅಧಿಕಾರಿಗಳ ಸಹಾಯದಿಂದ ಮುಂಬೈ ಪೊಲೀಸ್ ತಂಡ ಬಂಧಿಸಿದೆ. ಈ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ, ಇನ್ನೂ 6 ಔಷಧಿ ಬಾಟಲುಗಳಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳು ಪೂರೈಕೆ ಸರಪಳಿಯಲ್ಲಿರುವ ಇನ್ನೂ ಹೆಚ್ಚಿನ ಆರೋಪಿಗಳ ಹೆಸರನ್ನು ತಿಳಿಸಿದ್ದಾರೆ. ಪೊಲೀಸರು ದಾಳಿಗಳನ್ನು ಮುಂದುವರಿಸಿದ್ದು, ಇಂದು ಬೆಳಗಿನವರೆಗೆ ಈ ಪ್ರಕರಣದ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದ್ದು, ರೆಮ್ಡಿಸ್ವಿರ್‌ನ ಒಟ್ಟು 13 ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕರೊನಾವೈರಸ್ ಚಿಕಿತ್ಸೆಗೆ ರೆಮ್ಡಿಸ್ವಿರ್ ಒಂದು ಪರಿಣಾಮಕಾರಿ ಔಷಧವೆಂದು ಸಾಬೀತಾಗಿದೆ. ಮುಂಬೈ ಸೇರಿದಂತೆ ದೇಶಾದ್ಯಂತ ಔಷಧದ ಕೊರತೆ ಇರುವುದಾಗಿ ವರದಿಯಾಗಿದೆ. ವಾಸ್ತವವಾಗಿ, ಮುಂಬೈನಲ್ಲಿ ಔಷಧ ನೇರವಾಗಿ ಆಸ್ಪತ್ರೆಗಳಿಗೆ ಲಭ್ಯವಿದೆ. ಔಷಧದ ಕಾಳ ದಂಧೆಯೇ ಈ ಕೊರತೆ ಉದ್ಭವಿಸಲು ಕಾರಣವಾದಂತಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net