ರೆಮ್​ಡಿಸಿವಿರ್ ಬಗ್ಗೆ ಆಘಾತಕಾರಿ ಅಂಶವನ್ನು ಬಿಚ್ಚಿಟ್ಟ ಏಮ್ಸ್​ ವೈದ್ಯ!

remdesivir
Published on

ನವದಹಲಿ: ಕರೊನಾ ಸೋಂಕಿತರಿಗೆ ಬಳಸುತ್ತಿರುವ ರೆಮ್​ಡಿಸಿವಿರ್ ಔಷಧಿಗೆ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಆದರೆ, ಈ ಔಷಧಿ ಬಗ್ಗೆ ದೆಹಲಿ ಏಮ್ಸ್​ ವೈದ್ಯರು ಆಘಾತಕಾರಿ ಅಂಶವನ್ನು ಪ್ರಸ್ತಾಪಿಸಿದ್ದಾರೆ.

ದೆಹಲಿ ಏಮ್ಸ್​ ಆಸ್ಪತ್ರೆ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಈ ಬಗ್ಗೆ ಮಾತನಾಡಿದ್ದು, ಶೇ 90ರಷ್ಟು ಸೋಂಕಿತ ಪ್ರಕರಣಗಳಲ್ಲಿ ರೆಮ್​ಡಿಸಿವಿರ್ ಔಷಧಿಯ ಅಗತ್ಯವಿಲ್ಲ. ಒಂದು ವೇಳೆ ಇವರು ಈ ಔಷಧಿ ತೆಗೆದುಕೊಂಡರೆ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು ಎಚ್ಚರಿಸಿದ್ದಾರೆ. ಅನವಶ್ಯಕವಾಗಿ ಕರೊನಾದ ಮೆದು ಲಕ್ಷಣಗಳುಳ್ಳ ರೋಗಿಗಳಿಗೆ ರೆಮ್​ಡಿಸಿವಿರ್​ನ್ನು ಬಳಸಿದರೆ ಔಷಧಿ ತೆಗೆದುಕೊಂಡ ರೋಗಿಗಳು ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಅಲ್ಲದೇ ಕೊರೊನಾ ಬಂದ ತಕ್ಷಣ ಆಕ್ಸಿಜನ್ ಎಂದು ಓಡಿಹೋಗುವುದು, ಆಕ್ಸಿಜನ್ ಸಂಗ್ರಹಿಸುವುದು, ರೆಮ್​ಡಿಸಿವಿರ್ ಬೇಕು ಎಂದು ಒತ್ತಾಯಿಸುವುದು ಸರಿಯಲ್ಲ. ಇದು ಅನವಶ್ಯಕ. ಒಂದು ವೇಳೆ ಆಕ್ಸಿಮೀಟರ್ 94ಕ್ಕಿಂತ ಕೆಳಗೆ ಇಳಿಯತೊಡಗಿದರೆ ವೈದ್ಯರ ಸಲಹೆ ಮೇರೆಗೆ ಆಕ್ಸಿಜನ್ ಹಾಗೂ ರೆಮ್​ಡಿಸಿವಿರ್ ಬಳಸಬಹುದು. ಆದರೆ, ರೆಮ್​ಡಿಸಿವಿರ್ ಮ್ಯಾಜಿಕ್ ಮಾಡುವುದಿಲ್ಲ ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.

ಆಕ್ಸಿಮೀಟರ್ 94ಕ್ಕಿಂತ ಮೇಲೆ ಇದ್ದರೆ ಕರೊನಾ ಪೀಡಿತರು ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಬಹುದು. ಉತ್ತಮ ಆಹಾರ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಪಡೆದು ಮನೆಯಲ್ಲೇ ಎಚ್ಚರಿಕೆಯಿಂದ ಇರಬೇಕು ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net