

ಕುಂಬಳೆ: ವಸತಿ ಯೋಜನೆ, ಇತರ ಸರ್ಕಾರಿ ಸವಲತ್ತು ಪಡೆಯಲು ವಿಫಲವಾಗುತ್ತಿರುವ ಕೊರಗ ಸಮುದಾಯಕ್ಕೆ ಈಗ ಪರಿಹಾರ ನೀಡುವ ಕಾರ್ಯ ಶುರುವಾಗಿದೆ.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಬದಿಯಡ್ಕದ ಪೆರಡಾಲದ ಕಾಲೊನಿಗೆ ಇತ್ತೀಚೆಗೆ ಭೇಟಿ ನೀಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕಂದಾಯ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಜಂಟಿ ಆಶ್ರಯದಲ್ಲಿ ‘ಆಪರೇಷನ್ ಸ್ಮೈಲ್’ ಯೋಜನೆಯನ್ನು ಕಂದಾಯ ಸಚಿವ ಕೆ. ರಾಜನ್ ಆರಂಭಿಸಿದ್ದಾರೆ.
ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನಲ್ಲಿರುವ 59 ಕಾಲೋನಿಗಳಲ್ಲಿ ಹರಡಿರುವ 478 ಎಕರೆ ಭೂಮಿಯ ಗಡಿಗಳನ್ನು ಅಳತೆ ಮಾಡಿ ಗುರುತಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಯೋಜನೆ ಭಾಗವಾಗಿ, ಇಲ್ಲಿಯವರೆಗೆ 213 ಕುಟುಂಬಗಳ ಭೂಮಿಯನ್ನು ಅಳತೆ ಮಾಡಿ ದಾಖಲಿಸಲಾಗಿದೆ. ಡಿಜಿಟಲ್ ಸಮೀಕ್ಷೆಯ ಭಾಗವಾಗಿ ಎಂಟು ಕಾಲೋನಿಗಳ ಭೂಮಿ ಅಳತೆ ಮಾಡಿ ನಕ್ಷೆ ಮಾಡಲಾಗಿದೆ. ಮಾರ್ಚ್ ಮೊದಲ ವಾರದೊಳಗೆ ಎಲ್ಲ ಯೋಜನಾ ಚಟುವಟಿಕೆಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮೇಲ್ವಿಚಾರಣೆಯಲ್ಲಿ, ಸರ್ವೇ ಸಹಾಯಕ ನಿರ್ದೇಶಕ ಆಸಿಫ್ ಅಲಿಯಾರ್ ಮತ್ತು ಕಾಸರಗೋಡು ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ.ಕೆ. ಮೋಹನದಾಸ್, ಸಹಾಯಕ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ.ವಿ. ರಾಘವನ್ ಯೋಜನೆಯ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.