ರಿಲಯನ್ಸ್​ಗೆ ಆಘಾತ ತಂದ ಅಮೆರಿಕ ನಿರ್ಬಂಧ

Health (8)
Published on

ನವದೆಹಲಿ: ರಷ್ಯಾದಿಂದ ರಿಯಾಯಿತಿ ದರದಲ್ಲಿ ದೊರೆಯುತ್ತಿರುವ ಕಚ್ಚಾತೈಲದ ಅತಿದೊಡ್ಡ ಖರೀದಿದಾರ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿ ಪ್ರಮಾಣವನ್ನು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾ ಜತೆ ವ್ಯವಹರಿಸುತ್ತಿರುವ ಕಂಪನಿಗಳ ಮೇಲೆ ಅಮೆರಿಕ ವಿಧಿಸಿರುವ ಇತ್ತೀಚಿನ ನಿರ್ಬಂಧಗಳ ಹಿನ್ನೆಲೆಯಲ್ಲಿ ಕಂಪನಿ ಈ ತೀರ್ಮಾನ ಕೈಗೊಂಡಿದೆ. ಆದರೆ, ಇದೇ ವೇಳೆ ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾಗಾರಗಳು ಮಧ್ಯವರ್ತಿ ವ್ಯಾಪಾರಿಗಳ ಮೂಲಕ ರಷ್ಯಾದಿಂದ ಖರೀದಿಯನ್ನು ಮುಂದುವರಿಸಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್​ನ ಜಾಮ್ಗರದಲ್ಲಿ ವಿಶ್ವದ ಅತಿದೊಡ್ಡ ತೈಲ ಶುದ್ಧೀಕರಣ ಸಂಕೀರ್ಣವನ್ನು ಹೊಂದಿರುವ ರಿಲಯನ್ಸ್, ರಷ್ಯಾ ದಿಂದ ಭಾರತಕ್ಕೆ ರವಾನೆಯಾಗುವ 1.7-1.8 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲದ ಪೈಕಿ ಸುಮಾರು ಅರ್ಧದಷ್ಟನ್ನು ಖರೀದಿ ಸುತ್ತಿದೆ. ನಂತರ ಪೆಟ್ರೋಲ್, ಡೀಸೆಲ್ ಮತ್ತು ವಿಮಾನದ ಇಂಧನ ವಾಗಿ ಪರಿವರ್ತಿಸುತ್ತದೆ. ಇದರ ದೊಡ್ಡ ಪಾಲು ಯುರೋಪ್ ಮತ್ತು ಅಮೆರಿಕದ ಮಾರುಕಟ್ಟೆಗಳಿಗೆ ಚಾಲ್ತಿ ಬೆಲೆಯಲ್ಲಿ ರಫ್ತಾಗುತ್ತದೆ. ಇದರಿಂದ ಕಂಪನಿಗೆ ಸಾಕಷ್ಟು ಲಾಭ ಬರುತ್ತಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ಎರಡು ದೊಡ್ಡ ತೈಲ ಕಂಪನಿಗಳಾದ ರೊಸ್​ನೆಫ್ಟ್ ಆಯಿಲ್ ಮತ್ತು ಲುಕಾಯಿಲ್ ಒಎಒ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದಾರೆ. ಇವು ಯೂಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾಕ್ಕೆ ಹಣಕಾಸು ಸಹಾಯ ಮಾಡುತ್ತಿವೆ ಎಂಬುದು ಟ್ರಂಪ್ ಆರೋಪವಾಗಿದೆ. ಅಮೆರಿಕದ ಅಥವಾ ವಿದೇಶಗಳ ಯಾವುದೇ ಕಂಪನಿಯು ರಷ್ಯಾದ ರೊಸ್​ನೆಫ್ಟ್​ನೊಂದಿಗೆ ರಿಲಯನ್ಸ್ ವ್ಯಾಪಾರ ಮಾಡುತ್ತಿದೆ. ರೊಸ್​ನೆಫ್ಟ್​ನಿಂದ ದಿನಕ್ಕೆ 5 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು (ವರ್ಷಕ್ಕೆ 25 ದಶಲಕ್ಷ ಟನ್) ಖರೀದಿಸಲು 25 ವರ್ಷಗಳ ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಿದೆ. ಈಗ ಟ್ರಂಪ್ ಬೆದರಿಕೆಯಿಂದಾಗಿ ರಿಲಯನ್ಸ್ ರಷ್ಯಾದಿಂದ ಎಲ್ಲ ಖರೀದಿಗಳನ್ನು ಕಡಿಮೆಗೊಳಿಸಲಿದೆ. ಅಥವಾ ಸಂಪೂರ್ಣವಾಗಿ ನಿಲ್ಲಿಸಲಿದೆ. ಇದಲ್ಲದೆ ರಿಲಯನ್ಸ್ ಕಂಪನಿ ಅಮೆರಿಕದಲ್ಲಿ ಸಾಕಷ್ಟು ವ್ಯಾಪಾರ ಸಂಬಂಧಗಳನ್ನು ಹೊಂದಿದ್ದು, ಅನಗತ್ಯವಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧವಿಲ್ಲ ಎಂದು ಮೂಲಗಳು ವಿವರಿಸಿವೆ.

ಅಮೆರಿಕದ ನಿರ್ಬಂಧಗಳಿಂದ ಭಾರಿ ಹೊಡೆತ ಎದುರಿಸುವ ಇನ್ನೊಂದು ಕಂಪನಿಯೆಂದರೆ ನಯಾರಾ ಎನರ್ಜಿ. ಇದರಲ್ಲಿ ರೊಸ್​ನೆಫ್ಟ್ ಶೇ. 49.13ರಷ್ಟು ಪಾಲು ಹೊಂದಿದೆ. ಜುಲೈನಲ್ಲಿ ಐರೋಪ್ಯ ಒಕ್ಕೂಟ ನಿರ್ಬಂಧ ವಿಧಿಸಿದ ಬಳಿಕ ಈ ಕಂಪನಿ ರಷ್ಯನ್ ತೈಲದ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಶುದ್ಧೀಕರಣ ಕಂಪನಿಗಳು ರೊಸ್​ನೆಫ್ಟ್ ಅಥವಾ ಲುಕಾಯಿಲ್​ನೊಂದಿಗೆ ನೇರ ಒಪ್ಪಂದ ಮಾಡಿಕೊಂಡಿಲ್ಲ. ನಿರ್ಬಂಧದ ಜಾಲದಿಂದ ಹೊರಗಿರುವ ಯುರೋಪಿಯನ್ ಮಧ್ಯವರ್ತಿ ವ್ಯಾಪಾರಿಗಳ ಮೂಲಕ ಇವು ರಷ್ಯಾದ ತೈಲವನ್ನು ಖರೀದಿಸುತ್ತಿವೆ. ಹಾಗಾಗಿ ಟ್ರಂಪ್ ನಿರ್ಬಂಧದ ಬಿಸಿ ಇವುಗಳಿಗೆ ತಟ್ಟುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ವರ್ಷಾಂತ್ಯಕ್ಕೆ ಪೂರ್ಣ ಸ್ಥಗಿತ

ವಾಷಿಂಗ್ಟನ್: ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿದ್ದು, ವರ್ಷಾಂತ್ಯದ ವೇಳೆಗೆ ಅದನ್ನು ಬಹುತೇಕ ಶೂನ್ಯಕ್ಕೆ ಇಳಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ಇದು ಒಂದು ಪ್ರಕ್ರಿಯೆ. ಒಮ್ಮೆಲೇ ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಚೀನಾವನ್ನೂ ಅದೇ ರೀತಿ ಮಾಡಲು ಒಪ್ಪಿಸುತ್ತೇನೆ. ನಿನ್ನೆ ಪ್ರಧಾನಿ ಮೋದಿ ಜತೆ ಮಾತನಾಡಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ’ ವುದಾಗಿ ಟ್ರಂಪ್ ತಿಳಿಸಿದ್ದಾರೆ.

ಒಪ್ಪಂದ ಶೀಘ್ರ ಅಂತಿಮ

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಮಾತುಕತೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ನ್ಯಾಯಸಮ್ಮತ ಒಪ್ಪಂದ ಅಂತಿಮಗೊಳ್ಳಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಗುರುವಾರ ಹೇಳಿದ್ದಾರೆ. ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರವಾಲ್ ನೇತೃತ್ವದ ಭಾರತೀಯ ಅಧಿಕಾರಿಗಳ ತಂಡ ಕಳೆದ ವಾರ ವಾಷಿಂಗ್ಟನ್​ನಲ್ಲಿ ಅಮೆರಿಕದ ಅಧಿಕಾರಿಗಳ ಜತೆ ವ್ಯಾಪಾರ ಮಾತುಕತೆ ನಡೆಸಿತ್ತು. 3 ದಿನಗಳ ಮಾತುಕತೆ ಅ. 17ರಂದು ಕೊನೆಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net